

ದಾವಣಗೆರೆ : ಆಡಳಿತ ಪಕ್ಷದ ಕಿವಿ ಹಿಂಡುವ ಜತೆಗೆ ಜನರ ಧ್ವನಿಯಾಗಿ ಕೆಲಸ ಮಾಡುವುದಾಗಿ ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಹೇಳಿದರು.
ಪಾಲಿಕೆಯಲ್ಲಿ ಶುಕ್ರವಾರ ತಮ್ಮ ನೂತನ ಕಚೇರಿಯ ಶುಭಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರದಲ್ಲಿ ಇರುವವರ ಒಳ್ಳೆಯ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತೇನೆ. ಅವರು ಹಾದಿ ತಪ್ಪಿದಾಗ ಎಚ್ಚರಿಸುವ ಮೂಲಕ ಸಮರ್ಥ ಪ್ರತಿಪಕ್ಷವಾಗಿ ರಚನಾತ್ಮಕ ಕೆಲಸ ಮಾಡುವುದಾಗಿ ತಿಳಿಸಿದರು.
ಕಳೆದ 6 ತಿಂಗಳಿಂದ ಸಾಮಾನ್ಯ ಸಭೆಯನ್ನು ಕರೆದಿಲ್ಲ. ಈ ಬಗ್ಗೆ ನಮ್ಮ ಒತ್ತಾಯದ ಮೇರೆಗೆ ಅ. 31 ರಂದು ಸಭೆ ಕರೆದಿದ್ದಾರೆ. ಅಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾರ್ಗದರ್ಶನದಲ್ಲಿ, ಬಿಜೆಪಿ ಅವಧಿಯ ಕ್ರಿಯಾ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಒತ್ತಡ ಹೇರುವೆ. ಒಟ್ಟಾರೆ ಜನಪರವಾಗಿ ನಿಂತು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಪೌರ ಕಾರ್ಮಿಕರು, ಲೋಡರ್‌ಗಳು, ಒಳಚರಂಡಿ ಸ್ವಚ್ಛತೆ ಮಾಡುವವರು, ನೀರ್‌ಗಂಟಿಗಳು, ಕಸದ ವಾಹನ ಚಾಲಕರು ಪಂಚಭೂತಗಳಿದ್ದಂತೆ. ಇದೇ ಕಾರಣಕ್ಕೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅವರಿಂದಲೇ ಜ್ಯೋತಿ ಬೆಳಗಿಸುವುದಾಗಿಯೂ, ಅಂಬೇಡ್ಕರ್, ಬಸವಣ್ಣ ಅವರ ಸಮಾನತೆಯ ಆಶಯದಂತೆ ಕೆಲಸ ಮಾಡುವುದಾಗಿ ತಿಳಿಸಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಹರಿಹರ ಶಾಸಕ ಬಿ.ಪಿ. ಹರೀಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಸೋಗಿ ಶಾಂತಕುಮಾರ್ ಇತರರು ಶುಭ ಹಾರೈಸಿದರು.
ಪ್ರಸನ್ನ ಕುಮಾರ್ ಮಹಾನಗರ ಪಾಲಿಕೆಯ ಈ ಅವಧಿಯ 3ನೇ ಪ್ರತಿಪಕ್ಷ ನಾಯಕರಾಗಿದ್ದಾರೆ.