ಪೌರಕಾರ್ಮಿಕರ ಶೋಷಣೆ ಆರೋಪ

IMG-20251030-WA0005.jpg
Published on

ದಾವಣಗೆರೆ  : ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಪೌರಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಮಾದಿಗ ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ಆರೋಪಿಸಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.  ರೇಣುಕಾ ಆಯುಕ್ತೆಯಾಗಿ ಮೂರು ವರ್ಷ ತುಂಬುತ್ತಿದೆ. ನಾಲ್ವರು ಪೌರಕಾರ್ಮಿಕರು ಸೇರಿದಂತೆ 41 ನೌಕರರನ್ನು ಅಮಾನತು ಮಾಡಿದ್ದಾರೆ. ಹಸಿ ಕಸ ಮತ್ತು ಒಣ ಕಸ ವಿಂಗಡಣೆಗೆ 19.19 ಕೋಟಿಗೆ ಟೆಂಡರ್ ನೀಡಲಾಗಿದೆ. ಕಸ ಬೇರ್ಪಡಿಸಿ ಗೊಬ್ಬರ ತಯಾರಿಸುವ ಕಾರ್ಯವನ್ನು ಗುತ್ತಿಗೆದಾರ ಕಂಪನಿ ಮಾಡುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾದ ಕಸವನ್ನು ಹರಪನಹಳ್ಳಿ ತಾಲೂಕಿನ ಗಣಿಗಾರಿಕೆ ಪ್ರದೇಶದ ಗುಂಡಿಗಳಿಗೆ ಸುರಿಯಲಾಗುತ್ತಿದೆ ಎಂದು ಹೇಳಿದರು.  ಪೌರ ಕಾರ್ಮಿಕರಿಗೆ ಬೆಳಗಿನ ತಿಂಡಿ, ಊಟ, ಕೈಗವಸು, ಸೋಪ್ ಇನ್ನಿತರ ಸೌಲಭ್ಯಗಳು ಪೌರಕಾರ್ಮಿಕರನ್ನು ತಲುಪುತ್ತಿಲ್ಲ. ಕಸ ಗುಡಿಸುವ ಪೊರಕೆಗಳನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದರು.  ಸಮಿತಿಯ ಮುಖಂಡರಾದ ಎಚ್. ಚಿದಾನಂದಪ್ಪ, ಎಂ. ಆಂಜನೇಯ, ಎಂ.ಡಿ. ಶಿವಕುಮಾರ್, ದಾನಪ್ಪ ದೊಡ್ಡಮನಿ, ಹಾಲೇಕಲ್ಲು ಲೋಕೇಶ್ ಇದ್ದರು.  ಈ ಕುರಿತು ಪಾಲಿಕೆ ಆಯುಕ್ತೆ ರೇಣುಕಾ ಪ್ರತಿಕ್ರಿಯಿಸಿ, ನಾನು ದಾವಣಗೆರೆಗೆ ಬಂದ ಮೇಲೆ ಪೌರ ಕಾರ್ಮಿಕರ ಶೋಷಣೆ ಕಡಿಮೆಯಾಗಿದೆ. ಸಕಾಲಕ್ಕೆ ವೇತನ ನೀಡಲಾಗುತ್ತಿದೆ. 250 ಪೌರ ಕಾರ್ಮಿಕರ ಸೇವೆ ಕಾಯಂ ಮಾಡಲಾಗಿದೆ. ಅವರಿಗೆ 388 ಮನೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.  ಕೆಲವು ಪೌರ ಕಾರ್ಮಿಕರು ಕೆಲಸ ಮಾಡಲು ಸಮರ್ಥರಿದ್ದರೂ ಬದಲಿ ಆಳುಗಳನ್ನಿಟ್ಟು ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಆರೋಪ ಮಾಡಿದ್ದಾರೆ ಎಂದರು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net