ಮುಂದುವರಿದ ಪಾಲಿಕೆ ನೌಕರರ ಮುಷ್ಕರ

dvg-palike_20250710004637702.jpg
Published on

ದಾವಣಗೆರೆ  : ದಾವಣಗೆರೆ ಮಹಾನಗರ ಪಾಲಿಕೆ ನೌಕರರ ಮುಷ್ಕರ ಮುಂದುವರಿದಿದ್ದು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಾಲಿಕೆ ನೌಕರರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.  ಪಾಲಿಕೆಯ ಪ್ರವೇಶ ದ್ವಾರದ ಬಳಿ ಸೇರಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ತಮಗೆ ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.  ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ ಬೇಡಿಕೆಗಳ ಬಗ್ಗೆ ಗಮನ ಸೆಳೆದರು.  ಈ ಸಂದರ್ಭದಲ್ಲಿ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಮಾತನಾಡಿ, ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.  ಏಳನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ಮಹಾನಗರ ಪಾಲಿಕೆ ಅಧಿಕಾರಿ, ನೌಕರರಿಗೆ ಯಥಾವತ್ತಾಗಿ ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಪೂರ್ಣ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.  ವೃಂದ ಮತ್ತು ನೇಮಕಾತಿ ನಿಯಮ-2011 ಕ್ಕೆ ತಿದ್ದುಪಡಿ ಮಾಡಿ ಅಧಿಸೂಚನೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.  ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗುವುದರಿಂದ ಅನೇಕ ರೋಗ ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಪೌರ ಕಾರ್ಮಿಕರಿಗೂ ವಿಸ್ತರಿಸಬೇಕು ಎಂದರು.  ಮುಷ್ಕರದ ಪರಿಣಾಮವಾಗಿ ರಾಜ್ಯದ 10 ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಕೆಲಸ ಸ್ಥಗಿತವಾಗಿದೆ. ನಗರದ ಸ್ವಚ್ಛತಾ ಕಾರ್ಯ ನಿಲ್ಲಿಸಲಾಗಿದೆ. ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.  ಪೌರ ಕಾರ್ಮಿಕ ಮುಖಂಡ ಎಲ್.ಎಂ. ಹನುಮಂತಪ್ಪ ಮಾತನಾಡಿ, ಸರ್ಕಾರ ಪೌರ ಕಾರ್ಮಿಕರ ಬಗ್ಗೆ ತಾರತಮ್ಯ ಧೋರಣೆಯನ್ನು ಕೈಬಿಡಬೇಕು. ಪೌರ ಕಾರ್ಮಿಕರಿಗೆ ಮಕ್ಕಳ ಶಾಲಾ ಶುಲ್ಕ ಭರಿಸುವುದು ಕಷ್ಟವಾಗಿದೆ. ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಜೀವನ ಸಾಗಿಸುವುದು ಕಷ್ಟಕರವಾಗಿದೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಎಲ್ಲ ಕೆಲಸಗಳನ್ನೂ ಬಂದ್ ಮಾಡಲಾಗುವುದು. ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.  ಮತ್ತೊಬ್ಬ ಮುಖಂಡ ಎನ್. ನೀಲಗಿರಿಯಪ್ಪ ಮಾತನಾಡಿದರು. ಪಾಲಿಕೆಯ ವಲಯ ಆಯುಕ್ತ ನಾಗರಾಜ್, ಸಂಘದ ಸಹ ಕಾರ್ಯದರ್ಶಿ ನಾಮದೇವ್, ಎನ್. ನಾಗರತ್ನಮ್ಮ, ಎಸ್.ಕೆ. ಪಾಂಡುರಾಜ್, ಚಂದ್ರಕುಮಾರ್, ಟಿ.ಸಿ. ಬಸವರಾಜ್, ಎಲ್.ಎಂ.ಎಚ್. ಸಾಗರ್ ಇನ್ನಿತರ ಮುಖಂಡರು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net