ವಾಣಿಜ್ಯ ಕಸ ವಿಂಗಡಣೆಗೆ ಜ. 1 ರ ಗಡುವು

dvg-palike-sabhe-1.jpg
Published on

ದಾವಣಗೆರೆ : ವಾಣಿಜ್ಯ ಕಸವನ್ನು ಹಸಿ ಮತ್ತು ಒಣ ಎಂದು ವಿಂಗಡಿಸಿ ನೀಡಲು ಮಹಾನಗರ ಪಾಲಿಕೆ ಜ. 1 ರ ಗಡುವು ವಿಧಿಸಿದೆ. ಈ ನಿಯಮ ಪಾಲಿಸದಿದ್ದರೆ ಹೊಸ ವರ್ಷದಿಂದ ದಂಡ ಬೀಳಲಿದೆ.  ವಾಣಿಜ್ಯ ತ್ಯಾಜ್ಯ ವಿಲೇವಾರಿ ಕುರಿತು ಚರ್ಚಿಸಲು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಲಾಡ್ಜ್, ಜ್ಯೂಸ್ ಅಂಗಡಿ, ಸೂಪರ್ ಮಾರ್ಕೆಟ್, ಬೇಕರಿ ಮತ್ತು ಕಲ್ಯಾಣ ಮಂಟಪ ಮಾಲೀಕರ ಸಭೆಯಲ್ಲಿ ಮೇಯರ್ ಕೆ. ಚಮನ್ ಸಾಬ್ ಈ ವಿಷಯ ತಿಳಿಸಿದರು.  ದಿನಕ್ಕೆ 100 ಕೆಜಿ ತ್ಯಾಜ್ಯ ಉತ್ಪಾದಿಸುವವರು ಕಸದಿಂದ ಜೈವಿಕ ಅನಿಲವನ್ನು ತಾವೇ ಉತ್ಪಾದಿಸಬಹುದು. ಇದರಿಂದ ಸ್ವಚ್ಛತೆ ಕಾಪಾಡಲು ಅನುಕೂಲವಾಗಲಿದೆ ಎಂದು ಹೇಳಿದರು.  ಆಯುಕ್ತೆ ರೇಣುಕಾ ಪ್ರಾಸ್ತಾವಿಕವಾಗಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 1.71 ಲಕ್ಷ ಆಸ್ತಿಗಳಿವೆ. ಅವುಗಳಲ್ಲಿ 1.10 ಲಕ್ಷ ಮನೆಗಳು, 55 ಸಾವಿರ ನಿವೇಶನಗಳು, 13 ಸಾವಿರ ವಾಣಿಜ್ಯ ಉದ್ದೇಶದ ಸಂಸ್ಥೆಗಳಿವೆ ಎಂದು ತಿಳಿಸಿದರು.  ಶೇ. 80 ರಷ್ಟು ವಾಣಿಜ್ಯ ಕಸ ವಿಂಗಡೆಯಾಗುತ್ತಿದ್ದು ಉಳಿದ ಶೇ. 20 ರಷ್ಟು ತ್ಯಾಜ್ಯ ವಿಂಗಡಣೆ ಆಗುತ್ತಿಲ್ಲ. ಎಲ್ಲರೂ ಕೈಜೋಡಿಸಿದರೆ ಮಾತ್ರ ನಗರದ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದು ಹೇಳಿದರು.  ಸ್ವಚ್ಛ ಸರ್ವೇಕ್ಷಣೆಯಲ್ಲಿ 2023-24 ರಲ್ಲಿ ದಾವಣಗೆರೆಯು ಸ್ವಚ್ಛತೆಯಲ್ಲಿ ದೇಶದಲ್ಲಿ 184ನೇ ಸ್ಥಾನ, ರಾಜ್ಯದಲ್ಲಿ 4ನೇ ಸ್ಥಾನ ಪಡೆದಿತ್ತು. ಈ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸಲು, ಆರೋಗ್ಯದ ದೃಷ್ಟಿಯಿಂದ ಎಲ್ಲರ ಸಹಕಾರ ಬೇಕು ಎಂದರು.  ಆವರಗೊಳ್ಳ ಬಳಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 16 ಎಕರೆಯಲ್ಲಿ ಕಸ ಬೆಟ್ಟದಂತೆ ಸಂಗ್ರಹವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 105 ಆಟೋಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.  ಕಸ ವಿಂಗಡಿಸಿ ಕೊಡದಿದ್ದರೆ ಒಂದು ಬಾರಿಗೆ 1 ಸಾವಿರ ರೂ, ಹಾಗೇ ಮುಂದುವರಿದರೆ ದಂಡದ ಮೊತ್ತವು ದುಪ್ಪಟ್ಟಾಗಲಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.  ಕಸ ಪಡೆಯುವ ವಾಹನಗಳು ಪ್ರತಿ ದಿನ ತಪ್ಪದೇ ಬರಬೇಕು. ಹಸಿ ಮತ್ತು ಒಣ ಕಸವನ್ನು ಒಂದೇ ದಿನ ಸಂಗ್ರಹಿಸಬೇಕು. ರಜೆ ಇದ್ದಾಗ ಮೂರ್ನಾಲ್ಕು ದಿನವಾದರೂ ತ್ಯಾಜ್ಯ ಸಂಗ್ರಹಿಸಲು ಬರುವುದಿಲ್ಲ. ಇದರಿಂದಾಗಿ ಕಸದ ವಾಸನೆ ಬರುತ್ತದೆ. ವಾಹನಗಳು ಬರದಿದ್ದಾಗ ಅನಿವಾರ್ಯವಾಗಿ ಕೆಲವರು ಕಸವನ್ನು ರಾಜಕಾಲುವೆಗೆ ಹಾಕುತ್ತಾರೆ ಎಂದು ಹೋಟೆಲ್ ಮಾಲೀಕರು ತಿಳಿಸಿದರು.  ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಆಶಾ ಉಮೇಶ್, ಸವಿತಾ ಹುಲ್ಮನಿ, ಸುಧಾ ಇಟ್ಟಿಗುಡಿ, ಸದಸ್ಯರಾದ ಎ. ನಾಗರಾಜ, ಶಿವಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net