

ದಾವಣಗೆರೆ: ಕರೊನಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದ ಭಾರತದ ಆರ್ಥಿಕತೆಯು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಆತ್ಮ ನಿರ್ಭರ ಭಾರತ ಪ್ಯಾಕೇಜ್‌ನಿಂದಾಗಿ ಬೆಳವಣಿಗೆಯತ್ತ ಸಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ಯಾಕೇಜ್ ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ. ಒಂದು ಕಡೆ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಲ್ಯಾಣಕ್ಕಾಗಿ 16 ಯೋಜನೆಗಳ ಘೋಷಣೆ, ಇನ್ನೊಂದು ಕಡೆ ಬಡವರು, ಶೋಷಿತರು, ಕೂಲಿ ಕಾರ್ಮಿಕರು, ರೈತರಿಗಾಗಿ ಹತ್ತು ಹಲವು ಘೋಷಣೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
ವೋಕಲ್ ಫಾರ್ ಲೋಕಲ್ ಆ್ಯಂಡ್ ಮೇಕ್ ಇಟ್ ಗ್ಲೋಬಲ್ ಆಂದೋಲನ ಪ್ರತಿಯೊಂದು ವಲಯದಲ್ಲೂ ಭಾರತವನ್ನು ಸ್ವಾವಲಂಬಿಯಾಗಿಸುವತ್ತ ಕೊಂಡೊಯ್ಯುತ್ತಿದೆ. ಇದು ಸ್ಥಳೀಯ ಉದ್ದಿಮೆದಾರರನ್ನು ಸಬಲಗೊಳಿಸಲಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ 1.70 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ ನಂತರ ಇದಕ್ಕೆ ಪೂರಕವಾಗಿ ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಪ್ಯಾಕೇಜ್ ಘೋಷಿಸಿದರು.
ದೇಶಾದ್ಯಂತ ವಿಮಾನನಿಲ್ದಾಣ, ಬಂದರು ನಿರ್ಮಾಣ, ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ 1ಲಕ್ಷ ಕೋಟಿ ಮೀಸಲಿಡಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಕೊಲ್ಯಾಟರಲ್ ಫ್ರೀ ಸಾಲ ನೀಡುವ ಯೋಜನೆಯಡಿ ಇಲ್ಲಿಯವರೆಗೆ 30 ಲಕ್ಷ ಕೈಗಾರಿಕೆಗಳಿಗೆ ಅಂದಾಜು 1.10 ಲಕ್ಷ ಕೋಟಿ ಸಾಲ ವಿತರಿಸಲಾಗಿದೆ.
ಭಾರತದ ಮುಂದಿರುವ ಅನೇಕ ಸವಾಲುಗಳನ್ನು ನಮ್ಮ ಸರ್ಕಾರ ಮುಂದಿನ ನಾಲ್ಕು ವರ್ಷಗಳಲ್ಲಿ ಸಮರ್ಥವಾಗಿ ಎದುರಿಸಲಿದೆ. ಅವುಗಳಿಗೆ ಸಮರ್ಪಕ ಪರಿಹಾರ ಕಂಡುಕೊಂಡು ದೇಶದ ಶಕ್ತಿ ಮತ್ತು ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಸಕ್ರಿಯವಾಗಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.