

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ 62 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿನಿಂದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಸೋಂಕಿತರ ಏರಿಕೆಯೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನೂರರ ಗಡಿ ದಾಟಿದೆ.
ಇಲ್ಲಿನ ನಿಟ್ಟುವಳ್ಳಿ ಜಯನಗರದ 55 ವರ್ಷದ ಮಹಿಳೆ ಶುಕ್ರವಾರ, ಜಾಲಿನಗರದ 50 ವರ್ಷದ ಮಹಿಳೆ ಜು.17ರಂದು ಮೃತಪಟ್ಟಿದ್ದಾರೆ. ಇಬ್ಬರೂ ಸಕ್ಕರೆ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದರು.
ದಾವಣಗೆರೆ ತಾಲೂಕಿನಲ್ಲಿ 24, ಹರಿಹರ 18, ಚನ್ನಗಿರಿ 15, ಜಗಳೂರು 3 ಹಾಗೂ ಹೊನ್ನಾಳಿ ತಾಲೂಕಿನಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.
ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿ, ಬಿ. ಕಲಪನಹಳ್ಳಿ, ನಗರದ ಬೀಡಿ ಲೇ ಔಟ್, ಇಜಾರ್‌ದಾರ್ ಗಲ್ಲಿ, ಬಾಷಾನಗರ, ಸಿದ್ದವೀರಪ್ಪ ಬಡಾವಣೆ, ಭಾರತ್ ಕಾಲನಿ, ಕೇಶವ ನಗರ, ನರಸರಾಜಪೇಟೆ, ಜಾಲಿನಗರ, ಯರಗುಂಟೆ, ನಿಜಲಿಂಗಪ್ಪ ಬಡಾವಣೆ, ಎಂಎಸಿಸಿ ಎ ಬ್ಲಾಕ್, ಜೆ.ಎಚ್.ಪಟೇಲ್ ಬಡಾವಣೆಗಳಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.
ಆಸ್ಪತ್ರೆಯಿಂದ 11 ಮಂದಿ ಬಿಡುಗಡೆ ಹೊಂದಿದ್ದು, ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 571ಕ್ಕೆ ಏರಿದೆ. ಜಿಲ್ಲೆಯಲ್ಲಿ ಈವರೆಗೆ 807 ಕರೊನಾ ಪ್ರಕರಣ ವರದಿಯಾಗಿದ್ದು 207 ಸಕ್ರಿಯ ಪ್ರಕರಣಗಳಿವೆ.