

ದಾವಣಗೆರೆ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ, ಅತ್ಯಾಚಾರ ಮಾಡಿದ ಪ್ರಕರಣದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 40 ಸಾವಿರ ರೂ. ದಂಡ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಅಪರಾಧಿಗೆ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಎಫ್ಟಿಎಸ್ಸಿ-1) ನ್ಯಾಯಾಲಯ ತೀರ್ಪು ನೀಡಿದೆ. ಮನೋಹರ ಸಿ.ಎಚ್. ಮತ್ತು ಹನುಮಂತ ಶಿಕ್ಷೆಗೆ ಗುರಿಯಾದವರು. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022 ರಲ್ಲಿ 13 ವರ್ಷದ ಬಾಲಕಿ ಶಾಲೆಗೆ ಹೋದವಳು ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಪರಾಧಿಯು ಬಾಲಕಿಯನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಮಾರ್ಗ ಮಧ್ಯೆ ದೇವಸ್ಥಾನವೊಂದರಲ್ಲಿ ಬಾಲಕಿಯನ್ನು ಮದುವೆಯಾಗಿದ್ದ. ಬೆಂಗಳೂರಿಗೆ ಹೋದ ನಂತರ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣದ ಬಗ್ಗೆ ಪೊಲೀಸ್ ಇನ್‌ಸ್ಪೆಕ್ಟರ್ ಮಧು ಪಿ.ಬಿ. ತನಿಖೆ ಕೈಗೊಂಡಿದ್ದರು. ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಸಂಬಂಧ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಎಫ್ಟಿಎಸ್ಸಿ-1) ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ಬುಧವಾರ ತೀರ್ಪು ನೀಡಿದರು. ಫಿರ್ಯಾದಿಯ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ಹಾಗೂ ಬಸವರಾಜ್ ಎ.ಎಂ. ಅವರು ವಾದ ಮಂಡಿಸಿದ್ದರು. ...