

ದಾವಣಗೆರೆ : ‘ಸ್ವ’ತ್ವದ ಆಶಯದೊಂದಿಗೆ ಶನಿವಾರದಿಂದ ಎರಡು ದಿನ ನಡೆಯಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ 4ನೇ ರಾಜ್ಯ ಅಧಿವೇಶನಕ್ಕೆ ಬೆಣ್ಣೆನಗರಿ ದಾವಣಗೆರೆ ಸಜ್ಜಾಗಿದೆ. ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಅಧಿವೇಶನಕ್ಕೆ ನಗರದ ಹೃದಯ ಭಾಗದಲ್ಲಿರುವ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಸಾಹಿತ್ಯದಲ್ಲಿ ‘ಸ್ವ’ತ್ವ ವಿಷಯದ ಕುರಿತು ಚರ್ಚೆ, ಸಂವಾದ, ಕವಿಗೋಷ್ಠಿ, ಹರಟೆಗೆ ಸಮ್ಮೇಳನ ಸಾಕ್ಷಿಯಾಗಲಿದೆ. ಬಾಗಲಕೋಟೆಯ ಸಾಹಿತಿ ಎಸ್.ಜಿ. ಕೋಟಿ ಅವರು ಅಧಿವೇಶನದ ಅಧ್ಯಕ್ಷರಾಗಿದ್ದಾರೆ. ಎರಡು ದಿನಗಳ ಸಾಹಿತ್ಯ ಹಬ್ಬದಲ್ಲಿ ನಾಡಿನ ಖ್ಯಾತ ಲೇಖಕರು, ಚಿಂತಕರು, ಕವಿಗಳು ಪಾಲ್ಗೊಳ್ಳುವರು. 2500 ರಿಂದ 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ನಗರದ 8 ವೃತ್ತಗಳಲ್ಲಿ ಪ್ರಚಾರದ ಬ್ಯಾನರ್ ಅಳವಡಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಇಲ್ಲದಂತೆ ಎಚ್ಚರ ವಹಿಸಲಾಗಿದ್ದು ಪರಿಸರ ಸ್ನೇಹಿಯಾದ ಬಟ್ಟೆಯ ಬ್ಯಾನರ್‌ಗಳನ್ನು ಬಳಸಲಾಗಿದೆ. 50 ಸ್ವಯಂ ಸೇವಕರು ವ್ಯವಸ್ಥೆಯಲ್ಲಿ ತೊಡಗಿದ್ದಾರೆ. ಅಧಿವೇಶನಕ್ಕೆ ಬರುವ ಪ್ರತಿನಿಧಿಗಳಿಗೆ ತಿಂಡಿ, ಊಟದ ವ್ಯವಸ್ಥೆಯಾಗಿದೆ. ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರ ಹಾಗೂ ಗೋಣಿವಾಡದಲ್ಲಿರುವ ಸೋಮೇಶ್ವರ ವಿದ್ಯಾಲಯದ ಹಾಸ್ಟೆಲ್‌ನಲ್ಲಿ ಸುಮಾರು 400 ಜನರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅವರಲ್ಲಿ 100 ಮಂದಿ ಮಹಿಳೆಯರು, 50 ಜನ ಹಿರಿಯ ಸಾಹಿತಿಗಳು ಇರಲಿದ್ದಾರೆ. ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರ ಆವರಣದಲ್ಲಿ 25ಕ್ಕೂ ಹೆಚ್ಚು ಪುಸ್ತಕ ಇನ್ನಿತರ ಮಳಿಗೆಗಳನ್ನು ಹಾಕಲಾಗಿದೆ. ಪ್ರಾಚೀನ ಹಾಗೂ ವರ್ತಮಾನದ ಸ್ವತ್ವಯುತ ಸಾಹಿತಿಗಳ ಮಾಹಿತಿ ಚಿತ್ರಗಳು, ಭಾರತೀಯ ಪರಂಪರೆ, ಸಂಸ್ಕೃತಿ ಬಿಂಬಿಸುವ 100ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ.