ರೈತರ ಸಮಸ್ಯೆ ಪರಿಹಾರಕ್ಕೆ ಜನತಾ ಅಧಿವೇಶನ

DVG-SAMAVESHA-30.jpg
Published on

ದಾವಣಗೆರೆ :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ದಿನ ಜನತಾ ಅಧಿವೇಶನ ನಡೆಸುವ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸಿದರು.  ನಗರದ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಯುಕ್ತ ಹೋರಾಟ-ಕರ್ನಾಟಕದ ಜಿಲ್ಲಾ ಸಂಘಟನಾ ಸಮಾವೇಶ ಉದ್ಘಾಟಿಸಿ, ಮಾತನಾಡಿದರು.  ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಮೂರು ಕರಾಳ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದರಿಂದ ರೈತರು ಬಿಜೆಪಿಯನ್ನು ಮನೆಗೆ ಕಳುಹಿಸಿದರು. ಕಾಂಗ್ರೆಸ್ ಸರ್ಕಾರ ಕೂಡ ರೈತವಿರೋಧಿ ಧೋರಣೆ ಅನುಸರಿಸಿದರೆ ಮನೆಗೆ ಕಳಿಸಲಿದ್ದಾರೆ ಎಂದು ಎಚ್ಚರಿಸಿದರು.  ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ಮತ್ತು ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಬೇಕು. ಬ್ಯಾಂಕ್ ಅಧಿಕಾರಿಗಳು ಬಲವಂತವಾಗಿ ಸಾಲ ವಸೂಲಾತಿಗೆ ಬಂದರೆ ಅವರನ್ನು ಊರಿನ ಕಂಬಕ್ಕೆ ಕಟ್ಟಿ ಹಾಕಿ, ನಿಮ್ಮೊಂದಿಗೆ ರೈತ ಸಂಘವಿದೆ ಎಂದರು.  ಸರ್ಕಾರ ಸ್ವಾಮಿನಾಥನ್ ವರದಿ ಪ್ರಕಾರ ರೈತರ ಉತ್ಪನ್ನಕ್ಕೆ ಬೆಂಬಲ ಬೆಲೆ ನೀಡದ ಕಾರಣ ರೈತ ಸಾಲಗಾರನಾಗಿದ್ದಾನೆ. ಇದೀಗ ಅತಿವೃಷ್ಟಿಯಿಂದ ಭತ್ತ, ಜೋಳ ನೆಲ ಕಚ್ಚಿದ್ದು, ಈರುಳ್ಳಿ ಕೊಳೆತು ಹೋಗಿದೆ. ಆದರೆ, ಸರ್ಕಾರ ಎಕರೆಗೆ 2500 ರೂ. ಪರಿಹಾರ ನೀಡುವುದು ಪ್ಯಾಕೇಟ್ ಬಿತ್ತನೆ ಬೀಜಕ್ಕೂ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಕೇಂದ್ರ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿದ್ದು, ಇದರಲ್ಲಿ ವಿದ್ಯುತ್ ಕಂಪನಿಗಳನ್ನು ಮೋದಿ ಸ್ನೇಹಿತರಿಗೆ ಧಾರೆ ಎರೆಯುವ ಹುನ್ನಾರ ಅಡಗಿದೆ. ಸ್ಮಾರ್ಟ್ ಮೀಟರ್ ಅಳವಡಿಸಿ, ಮೊಬೈಲ್‌ಗೆ ಕರೆನ್ಸಿ ಹಾಕಿಸುವಂತೆ ವಿದ್ಯುತ್‌ಗೂ ಕರೆನ್ಸಿ ಹಾಕಿಸುವ ದಿನಗಳು ಬರಲಿವೆ. ಸರ್ಕಾರ ಒಂದು ವೇಳೆ ವಿದ್ಯುತ್ ಖಾಸಗೀಕರಣಗೊಳಿಸಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಎಚ್ಚರಿಸಿದರು.  ಎಐಟಿಯುಸಿ ಮುಖಂಡ ಆವರಗೆರೆ ಎಚ್.ಜಿ. ಉಮೇಶ್ ಪ್ರಾಸ್ತಾವಿಕ ಮಾತನಾಡಿ, ರೈತ-ಕಾರ್ಮಿಕರ ಸಮಸ್ಯೆ ಪರಿಹಾರಕ್ಕಾಗಿ ದೇಶದ ಎಲ್ಲ ರೈತ ಮತ್ತು ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ, ರೈತರ ಮತ್ತು ಕಾರ್ಮಿಕರ ಐಕ್ಯ ಚಳವಳಿ ಕಟ್ಟುವ ಅವಶ್ಯಕತೆ ಎಂದರು.  ರೈತರ ಹೋರಾಟಕ್ಕೆ ಮಣಿದು ಪ್ರಧಾನಮಂತ್ರಿ ಮೋದಿ, ಮೂರು ಕರಾಳ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಲಿಖಿತ ಭರವಸೆ ನೀಡಿದ್ದರು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಆ ಕಾಯ್ದೆ ಇನ್ನೂ ರದ್ದುಪಡಿಸಿಲ್ಲ. ತಕ್ಷಣ ವಾಪಸ್ ಪಡೆಯಲು ಆಗ್ರಹಿಸಿ, ನ.26ರಂದು ದೇಶದ 500ಕ್ಕೂ ಹೆಚ್ಚು ಜಿಲ್ಲಾ ಕೇಂದ್ರಗಳಲ್ಲಿ ಎಚ್ಚರಿಕೆ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.  ರೈತ ಸಂಘದ ಹೊನ್ನೂರು ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕುರುವ ಗಣೇಶ್, ಅರುಣಕುಮಾರ್ ಕುರುಡಿ, ಆವರಗೆರೆ ಚಂದ್ರು, ಗುಮ್ಮನೂರು ಬಸವರಾಜ್, ಆನಂದರಾಜ್, ಈ. ಶ್ರೀನಿವಾಸ್, ಮಂಜುನಾಥ ಕುಕ್ಕುವಾಡ, ಪವಿತ್ರಾ, ಎಸ್.ಡಿ. ಗೀತಾ, ಬುಳ್ಳಾಪುರ ಹನುಮಂತಪ್ಪ, ಮರುಳಸಿದ್ದಯ್ಯ, ಟಿ.ಎಸ್. ನಾಗರಾಜ್, ಮಧು ತೊಗಲೇರಿ, ಸತೀಶ್ ಅರವಿಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net