ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ

hnl-praja-nov-30.jpg
Published on

ಹೊನ್ನಾಳಿ : ಭಾರತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನಿಸದೇ ಹಾಗೂ ಸಂವಿಧಾನ ರಚಿಸದೇ ಇದ್ದಿದ್ದರೆ ಸಾಮಾನ್ಯ ಜನತೆಯ ಜೀವನ ಊಹಿಸಲೂ ಆಗದಷ್ಟು ದುಸ್ತರವಾಗುತ್ತಿತ್ತು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.  ಶನಿವಾರ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಸಂವಿಧಾನ ರಚಿಸಿದ ಫಲವಾಗಿ ಸರ್ವರಿಗೂ ಸಮಪಾಲು, ಸಮಬಾಳು ರೂಪಿಸಿಕೊಳ್ಳುಲು ಸಹಕಾರಿಯಾಗಿದೆ. ಸಂವಿಧಾನದಿಂದಲೇ ದೇಶದ ಜನತೆ ಶಾಂತಿ, ನೆಮ್ಮದಿಯಿಂದ ಬದುಕುವ ಜತೆಗೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.  ಸಿದ್ದರಾಮಯ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಕಡುಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು, ಎಸ್ಸಿ ಮತ್ತು ಎಸ್ಟಿ ಸಮುದಾಯ ಸೇರಿ ಎಲ್ಲ ವರ್ಗದ ಬಡ ಜನರ ಕಾಲ್ಯಾಣ ಕಾರ್ಯ ಸುಗಮವಾಗಿ ನಡೆಯುವಂತಾಗಿದೆ ಎಂದು ಹೇಳಿದರು.  ವೇದಿಕೆಯ ರಾಜ್ಯ ಉಪಾಧ್ಯಕ್ಷ ಡಾ. ಸಯ್ಯದ್ ರೋಷನ್ ಮುಲ್ಲಾ ಮಾತನಾಡಿ, ದೇಶದಲ್ಲಿ ಯಾರಿಂದಲೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ, ಮೀಸಲಾತಿ ಎಂದರೆ  ಕೇವಲ ಸರ್ಕಾರಿ ನೌಕರಿ ಪಡೆಯುವದು ಅಷ್ಟೇ ಅಲ್ಲ, ಅದು ಸಮಾಜದಲ್ಲಿ ಜೀವನ ಭದ್ರತೆ ಪಡೆದುಕೊಳ್ಳುವ ದಲಿತ ಸಮುದಾಯದ ಹಕ್ಕಾಗಿದೆ ಎಂದು ತಿಳಿಸಿದರು.  ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎ.ಡಿ. ಈಶ್ವರಪ್ಪ ಮಾತನಾಡಿ, ದಲಿತ ವರ್ಗದವರು ಮೊದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಮ್ಮಲ್ಲಿರುವ ಮೂಢ ನಂಬಿಕೆಗಳನ್ನು ಬಿಟ್ಟು ಇತರರಂತೆ ಅಭಿವೃದ್ಧಿ ಪಥದತ್ತ ಸಾಗಬೇಕಾಗಿದೆ ಎಂದರು.  ನಿವೃತ್ತ ಡಿವೈಎಸ್‌ಪಿ ಸುಹೇಲ್ ಅಹ್ಮದ್ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿದರು.  ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಒ. ಹನುಮಂತಪ್ಪ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಅರಕೆರೆ ಎಚ್.ಕೆ. ಕೃಷ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಸಂವಿಧಾನ ಪಿಠೀಕೆಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.  ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ, ಜಿಪಂ ಮಾಜಿ ಅಧ್ಯಕ್ಷ ಎ.ಕೆ. ಮೈಲಪ್ಪ, ಹೊನ್ನಾಳಿ ತಾಲೂಕು ಸಮಿತಿ ನಗರ ಘಟಕ ಹಾಗೂ ನ್ಯಾಮತಿ ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net