ಉತ್ತಮ ವ್ಯಕ್ತಿತ್ವದೊಂದಿಗೆ ದೇಶದ ಆಸ್ತಿಯಾಗಿ

IMG_20231125_102551.jpg
Published on

ದಾವಣಗೆರೆ : ಮಕ್ಕಳು ದೇಶದ ಭವಿಷ್ಯವಾಗಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ರಾಷ್ಟ್ರದ ಆಸ್ತಿಯಾಗಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಸಲಹೆ ನೀಡಿದರು.
 ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮೇ ಸಾಹಿತ್ಯ ಬಳಗ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಸಂವಿಧಾನಕ್ಕಾಗಿ ನಾವು ಸಂಘಟನೆಗಳ ಸಹಯೋಗದಲ್ಲಿ ನಗರದ ಬಿಐಇಟಿ ಆವರಣದ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ, ಪ್ರೌಢಶಾಲಾ ಮಕ್ಕಳತ್ತ ಸಂವಿಧಾನ ಅರಿವಿನ ಯಾನ, 1 ಸಾವಿರ ಪ್ರೌಢಶಾಲಾ ಮಕ್ಕಳ ಕೈಗೆ ‘ಮಕ್ಕಳಿಗಾಗಿ ಸಂವಿಧಾನ’ ಕೃತಿ ನೀಡುವುದು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
 ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಶೇ. 40ರಷ್ಟು ಯುವಜನರಿದ್ದಾರೆ. ಅವರ ಭವಿಷ್ಯದ ಮೇಲೆ ರಾಷ್ಟ್ರದ ಭವಿತವ್ಯ ಅವಲಂಬಿತವಾಗಿದೆ ಎಂದು ತಿಳಿಸಿದರು.
 ಸಂವಿಧಾನ ಎಲ್ಲ ಕಾನೂನುಗಳ ತಾಯಿ. ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ್ಯವಿವಾಹ ತಡೆ, ಲೈಂಗಿಕ ದೌರ್ಜನ್ಯ ತಡೆ, ಬಾಲ್ಯವಿವಾಹ ನಿಷೇಧ ಇತ್ಯಾದಿ ಅನೇಕ ಕಾಯ್ದೆಗಳಿವೆ. ಆದರೆ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಇಚ್ಛಾಶಕ್ತಿ ಇರಬೇಕು. ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಓದಬೇಕು, ಅದರ ಸಾರವನ್ನು ಅರಿಯಬೇಕು. ಮಕ್ಕಳಿಗೂ ಇದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
 ವ್ಯಕ್ತಿಯ ವಿಕಸನ ಶಿಕ್ಷಣದ ಆಶಯವಾಗಿದೆ. ವಿದ್ಯೆ ಮತ್ತು ಸಂಸ್ಕಾರ ಸಾಧನೆಗೆ ದಾರಿ. ಮಕ್ಕಳಿಗೆ ಕಲಿಯುವ ಆಸಕ್ತಿ, ತುಡಿತವಿರಬೇಕು. ನಿಮ್ಮ ಬದುಕಿಗೆ ನೀವೇ ಶಿಲ್ಪಿಗಳಾಗಬೇಕು. ಎಲ್ಲರಲ್ಲೂ ಚೈತನ್ಯವಿರುತ್ತದೆ. ಕ್ಲಿಷ್ಟ ಮತ್ತು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
 ಸ್ವಾಮಿ ವಿವೇಕಾನಂದರು ಹೇಳಿರುವಂತೆ ಜೀವನದಲ್ಲಿ ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ನಿರ್ಭಯತೆ ಅಳವಡಿಸಿಕೊಳ್ಳಬೇಕು. ಸಮಾಜಮುಖಿಯಾಗಿ ಕೆಲಸ ಮಾಡಬೇಕು. ನಾವು ಗಳಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಬೇಕು ಎಂದು ಕಿವಿಮಾತು ಹೇಳಿದರು.
 ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಕರೆಣ್ಣವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್, ಚಿಂತಕ ಬಿ.ಎಂ. ಹನುಮಂತಪ್ಪ, ಡಿಡಿಪಿಐ ಜಿ. ಕೊಟ್ರೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ಇದ್ದರು. ಬಿ. ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು, ಗುರುಸಿದ್ಧಸ್ವಾಮಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net