ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ

IMG_20230712_120622.jpg
Published on

ದಾವಣಗೆರೆ : ಕೇಂದ್ರ ಸರ್ಕಾರ ಎಐಸಿಸಿ ನಾಯಕ ರಾಹುಲ್ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಲ್ಲಿನ ಮಹಾನಗರ ಪಾಲಿಕೆ ಮುಂಭಾಗ ಬುಧವಾರ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
 ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಭಿತ್ತಿಪತ್ರಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಸಂಜೆಯ ವರೆಗೂ ಮೌನವಾಗಿ ಧರಣಿ ನಡೆಸಿ ತಮ್ಮ ವಿರೋಧ ವ್ಯಕ್ತಪಡಿಸಿದರು.
 ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸರ್ಕಾರ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಎಐಸಿಸಿ ಹಾಗೂ ಕೆಪಿಸಿಸಿ ನಿರ್ದೇಶನದಂತೆ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.
 ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ದುರಾಡಳಿತದ ಬಗ್ಗೆ ಮಾತನಾಡಿದರೆ ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ರಾಹುಲ್ ಗಾಂಧಿ ಅವರು ದೇಶಾದ್ಯಂತ ‘ಭಾರತ್ ಜೋಡೋ’ ಪಾದಯಾತ್ರೆ ಮಾಡಿ ಬಿಜೆಪಿಯ ಹಗರಣಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದನ್ನು ಸಹಿಸದೇ ಬಿಜೆಪಿಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
 ದ್ವೇಷದ ರಾಜಕಾರಣವನ್ನು ಬಿಜೆಪಿಯವರು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
 ಪ್ರತಿಭಟನಾಕಾರರು ಹಿಡಿದಿದ್ದ ಭಿತ್ತಿಪತ್ರಗಳಲ್ಲಿ ‘ಸರ್ವಾಧಿಕಾರಿ ಧೋರಣೆಯ ಮೋದಿ ಅವರಿಗೆ ಧಿಕ್ಕಾರ’, ‘ನಾನು ನನ್ನ ದೇಶದ ಜನರ ಧ್ವನಿಯಾಗಿ ಹೋರಾಡುತ್ತಿದ್ದೇನೆ, ಅದಕ್ಕಾಗಿ ನಾನು ಯಾವುದೇ ತ್ಯಾಗಕ್ಕೆ ಸಿದ್ಧ’, ‘ನಮ್ಮ ಹೆಜ್ಜೆ ಜನತಾ ನ್ಯಾಯಾಲಯದತ್ತ’, ‘ಕುತಂತ್ರದ ವಾಮಮಾರ್ಗಿ ಬಿಜೆಪಿಗರಿಗೆ ಧಿಕ್ಕಾರ’, ‘ಕುತಂತ್ರದಿಂದ ಸತ್ಯವನ್ನು ಮುಚ್ಚಿಡಲಾಗದು’, ‘ಇದು ಮಹಾತ್ಮ ಗಾಂಧಿ ಹುಟ್ಟಿದ ದೇಶ, ಹಿಟ್ಲರ್ ಸಂಸ್ಕೃತಿ ಉಳಿಯುವುದಿಲ್ಲ’ ಎಂಬ ವಾಕ್ಯಗಳನ್ನು ಬರೆಯಲಾಗಿತ್ತು.
 ಮಹಾನಗರ ಪಾಲಿಕೆಯ ಮೇಯರ್ ವಿನಾಯಕ ಪೈಲ್ವಾನ್, ಎ. ನಾಗರಾಜ ಸೇರಿ ಪಾಲಿಕೆಯ ಸದಸ್ಯರು, ಮುಖಂಡರಾದ ಅನಿತಾಬಾಯಿ, ಮುದೇಗೌಡ್ರ ಗಿರೀಶ್, ಎಸ್. ಮಲ್ಲಿಕಾರ್ಜುನ, ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಸೋಮ್ಲಾಪುರ ಹನುಮಂತಪ್ಪ, ಹರೀಶ್ ಬಸಾಪುರ, ಶ್ರೀನಿವಾಸ ನಂದಿಗಾವಿ, ಟಿ. ಬಸವರಾಜ, ಸುಷ್ಮಾ ಪಾಟೀಲ್, ಗುರುರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net