

ದಾವಣಗೆರೆ : ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಹಿಡಿದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ರಾಜ್ಯದ ಬಡವರಿಗೆ ವಿತರಿಸುವುದಕ್ಕಾಗಿ ಅಕ್ಕಿ ನೀಡಲು ರಾಜಕೀಯ ಏಕೆ?, ಕೊಡುವುದಾಗಿ ಆದೇಶಿಸಿ ನಂತರ ಹಿಂದಕ್ಕೆ ಪಡೆದಿದ್ದು ಸರಿಯಲ್ಲ ಎಂದರು.
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಈ ವಿಚಾರವಾಗಿ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರವು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು. ಕೇಂದ್ರದ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಶೋಭಾ ಕರಂದ್ಲಾಜೆ ಅವರು ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ನೀಡಿರುವ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಭಾರತ ಸರ್ಕಾರ 18 ದೇಶಗಳಿಗೆ ಅಕ್ಕಿಯನ್ನು ನೀಡುತ್ತಿದೆ, ನಮ್ಮ ರಾಜ್ಯಕ್ಕೆ ನೀಡಲು ಏಕೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ?, 2 ವರ್ಷ ಬರಗಾಲ ಬಂದರೂ ನಿಭಾಯಿಸಬಹುದಾದಷ್ಟು ಅಕ್ಕಿಯ ದಾಸ್ತಾನಿದೆ. ಆದರೂ ರಾಜ್ಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಮಾತನಾಡಿ, ರಾಜ್ಯದ ಬಿಜೆಪಿ ಸಂಸದರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ, ಸ್ವಾಭಿಮಾನವಿದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಕೇಂದ್ರವು ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಅಕ್ಕಿ ಕೊಡುವ ವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ದೇಶಕ್ಕೇ ಮಾದರಿಯಾಗಿದ್ದು ಪ್ರತಿಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಕೇಂದ್ರ ಸರ್ಕಾರ ಬಡವರ, ದಲಿತರ ವಿರೋಧಿಯಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ ಮಾತನಾಡಿ, ಬಿಜೆಪಿ ಸಂಸದರು ರಾಜ್ಯದ ಜನರ ಹಿತ ಕಾಯಲು ವಿಫಲರಾಗಿದ್ದಾರೆ, ಅವರಿಗೆ ಬಳೆಗಳನ್ನು ಕಳಿಸಿಕೊಡುತ್ತೇವೆ ಎಂದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖಭಂಗವಾಗಿದೆ. ಅದಕ್ಕೆ ಪ್ರತಿಯಾಗಿ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. 7 ಲಕ್ಷ ಟನ್ ಅಕ್ಕಿಯ ದಾಸ್ತಾನಿದ್ದರೂ ನೀಡುತ್ತಿಲ್ಲ. ಅಕ್ಕಿಯ ಜತೆಗೆ ರಾಜಿ, ಜೋಳ, ಗೋಧಿಯನ್ನು ನೀಡಿ ನಮ್ಮ ಮಾತು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಉಚಿತ ಅಕ್ಕಿ ನೀಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಅಗತ್ಯ ಪ್ರಮಾಣದ ಅಕ್ಕಿಯನ್ನು ಖರೀದಿಸಲು ಸಿದ್ಧವಿದ್ದರೂ ಕೇಂದ್ರ ಸರ್ಕಾರ ನೀಡುತ್ತಿಲ್ಲ. ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಪಕ್ಷದ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್, ಅನಿತಾಬಾಯಿ, ಎಸ್. ಮಲ್ಲಿಕಾರ್ಜುನ್, ಸೋಮ್ಲಾಪುರದ ಹನುಮಂತಪ್ಪ, ಚಮನ್‌ಸಾಬ್, ಎ. ನಾಗರಾಜ್ ಸೇರಿ ಪಾಲಿಕೆಯ ಸದಸ್ಯರು ಇದ್ದರು.