ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ

cong.jpg
Published on

ದಾವಣಗೆರೆ : ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವ ನೀಡಿರುವ 5 ಗ್ಯಾರಂಟಿಗಳನ್ನು ಜೂನ್ 1 ರಿಂದ ಜಾರಿಗೆ ತರಲಿದ್ದು, ಬಿಜೆಪಿಯವರು ಸೋತು ಹತಾಶೆಯ ಭಾವನೆಯಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ತಿಳಿಸಿದರು.
 ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಂಗಳವಾರ, ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
 ಬಿಜೆಪಿ ತಟ್ಟೆಯಲ್ಲಿ ಹೆಗ್ಗಣವೇ ಬಿದ್ದಿದೆ, ಅದನ್ನು ನೋಡಿಕೊಳ್ಳದೆ ಮತ್ತೊಬ್ಬರ ತಟ್ಟೆಯಲ್ಲಿ ಏನು ಬಿದ್ದಿದೆ ಎಂಬುದರ ಬಗ್ಗೆ ಚಿಂತೆ ಬಿಜೆಪಿಯವರಿಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ, 2 ಕೋಟಿ ಉದ್ಯೋಗದಂತಹ ಭರವಸೆಗಳನ್ನು ನೀಡಿ ಒಂದನ್ನೂ ಈಡೇರಿಸದೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
 ಕಾಂಗ್ರೆಸ್ ಪಕ್ಷ ನುಡಿದಂತೆ ಹಿಂದೆಯೂ ನಡೆದಿದೆ, ಮುಂದೆಯೂ ನಡೆಯಲಿದೆ. ಜೂನ್ 1 ರಿಂದ ಹಂತ ಹಂತವಾಗಿ 5 ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದು, ಪಕ್ಷದ ಕಾರ‌್ಯಕರ್ತರು ಅವುಗಳನ್ನು ಅರ್ಹರಿಗೆ ತಲುಪುವಂತೆ ಮಾಡಬೇಕೆಂದು ವಿನಂತಿಸಿದರು.
 ಕೆಪಿಸಿಸಿ ಸದಸ್ಯ ಮುದೇಗೌಡ್ರು ಗಿರೀಶ್ ಮಾತನಾಡಿ ಪಕ್ಷದ ಕಾರ‌್ಯಕರ್ತರ ಶ್ರಮದಿಂದ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅರ್ಹರನ್ನು ಗುರುತಿಸಿ ಅವಕಾಶಗಳನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
 ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರ‌್ಯಕರ್ತರ ಶ್ರಮವೇ ಕಾರಣ. ಕಳೆದ 5 ವರ್ಷಗಳಿಂದ ಪಕ್ಷಕ್ಕೆ ದುಡಿದ ಕಾರ‌್ಯಕರ್ತರನ್ನು ಜಿಲ್ಲಾಧ್ಯಕ್ಷರು ಗುರುತಿಸಿ ವಿವಿಧ ಇಲಾಖೆಗಳಿಗೆ ನಾಮನಿರ್ದೇಶನ ಮಾಡಬೇಕೆಂದು ಆಗ್ರಹಿಸಿದರು.
 ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಪಕ್ಷಕ್ಕಾಗಿ ದುಡಿದವರನ್ನು ಗುರುತಿಸುವ ಕೆಲಸಗಳಾಗಲಿ ಎಂದು ಮನವಿ ಮಾಡಿದರು.
 ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳಾ ಕಾರ‌್ಯಕರ್ತರು ಮನೆ-ಮನೆಗೆ ತಲುಪಿಸುವಂತಹ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಪ್ರಾಶಸ್ತ್ಯ ನೀಡಬೇಕೆಂದು ಮನವಿ ಮಾಡಿದರು.
 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜಿ. ಶಿವಕುಮಾರ್ ಮತ್ತು ಅಯೂಬ್ ಪೈಲ್ವಾನ್ ಮಾತನಾಡಿದರು. ಜಿಲ್ಲಾ ಕಾರ‌್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ್, ಎ.ನಾಗರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್, ನಿವೃತ್ತ ಕಾರ‌್ಯಪಾಲಕ ಇಂಜಿನಿಯರ್ ಆನಂದಪ್ಪ, ಎನ್.ಜೆ.ನಿಂಗಪ್ಪ, ರಾಮಚಂದ್ರ, ಅಡಾಣಿ ಸಿದ್ದಪ್ಪ, ಸುರೇಶ್, ಹರೀಶ್ ಬಸಾಪುರ, ರಾಜೇಶ್ವರಿ, ಶುಭ ಮಂಗಳ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net