

ದಾವಣಗೆರೆ : ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗಿದೆ. ಲೋಕಸಭಾ ಚುನಾವಣೆಯಲ್ಲಿಯೂ ವಿಜಯ ಯಾತ್ರೆ ಮುಂದುವರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಯ ಕೆಲಸ ಮಾಡಬೇಕು ಎಂದು, ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ದಾವಣಗೆರೆ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕಳೆದ 4-5 ಅವಧಿಯಲ್ಲಿ ಬಿಜೆಪಿ ಗೆಲ್ಲುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಿಡಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಜ್ಯದಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಅದೇ ಹುಮ್ಮಸ್ಸಿನಲ್ಲಿ ಲೋಕಸಭಾ ಚುನಾವಣೆಯಲ್ಲೂ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗಳೂರು ಶಾಸಕ ದೇವೇಂದ್ರಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿದರು. ಮಾಜಿ ಶಾಸಕ ಎಸ್. ರಾಮಪ್ಪ, ಮೋಹನ್ ಕೊಂಡಜ್ಜಿ, ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಮುದೇಗೌಡ್ರ ಗಿರೀಶ್, ಸೈಯದ್ ಸೈಫುಲ್ಲಾ, ನಂದಿಗಾವಿ ಶ್ರೀನಿವಾಸ್, ಬಿ.ಎಚ್. ವೀರಭದ್ರಪ್ಪ, ಪಾಲಯ್ಯ, ಕಲ್ಲೇಶ್‌ರಾಜ್ ಪಟೇಲ್, ನಿಖಿಲ್ ಕೊಂಡಜ್ಜಿ ಇದ್ದರು.
...
* ಇತ್ತೀಚೆಗೆ ಬಂದವರಿಗೆ ಟಿಕೆಟ್ ಬೇಡ
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕುಟುಂಬದಿಂದ ಯಾರಿಗಾದರೂ ಟಿಕೆಟ್ ಕೊಟ್ಟರೆ ಎಲ್ಲರ ಬೆಂಬಲ ಇದೆ. ಇಲ್ಲವಾದರೆ ನನಗೇ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಬೇಡಿಕೆ ಇಟ್ಟರು.
ಸಂಘಟನೆಗಾಗಿ ಶ್ರಮಿಸಿದವರಿಗೆ ಟಿಕೆಟ್ ಕೊಡಬೇಕೇ ಹೊರತು, ಇತ್ತೀಚೆಗೆ ಬಂದು ಪ್ರಚಾರ ಮಾಡಿದವರಿಗೆ ಬೇಡ. ಕೆಲವೇ ತಿಂಗಳ ಹಿಂದೆ ಬಂದು ನಾನು ಅಭ್ಯರ್ಥಿ ಎಂದು ಫ್ಲೆಕ್ಸೃ್ ಹಾಕಿದವರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
...
* ಪೋಸ್ಟರ್ ಹಿಡಿದು ಬಂದ ಅಭಿಮಾನಿಗಳು
ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪೈಪೋಟಿ, ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಹಿರಂಗವಾಯಿತು.
ಸಭೆ ಆಯೋಜನೆಯಾಗಿದ್ದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಆಕಾಂಕ್ಷಿ ಜಿ.ಬಿ. ವಿನಯ ಕುಮಾರ್ ಅಭಿಮಾನಿಗಳು ತಮ್ಮ ನಾಯಕನ ಪೋಸ್ಟರ್ ಹಿಡಿದು ಕುಳಿತಿದ್ದರು. ಸಚಿವ ಈಶ್ವರ ಖಂಡ್ರೆ ಅವರು ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸುವ ಹೊತ್ತಿನಲ್ಲಿ ‘ವಿನಯ ಕುಮಾರ್‌ಗೆ ಜೈ’ ಎಂಬ ಘೋಷಣೆಗಳು ಕೇಳಿಬಂದವು. ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಬೆಂಬಲಿಗರು ಸಚಿವರ ಗಮನ ಸೆಳೆಯಲು ಪ್ರಯತ್ನಿಸಿದರು.
ಸಭೆಯ ಬಳಿಕ ಎಂಬಿಎ ಕಾಲೇಜಿನ ಕೊಠಡಿಯೊಂದರಲ್ಲಿ ಸಚಿವ ಖಂಡ್ರೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ವಿನಯಕುಮಾರ್ ಬೆಂಬಲಿಗರು ಅಲ್ಲಿಗೂ ತೆರಳಿ ಮತ್ತೆ ಘೋಷಣೆಗಳನ್ನು ಕೂಗಿದರು.