

ದಾವಣಗೆರೆ : ಉತ್ತರಾಧಿಕಾರಿ ನೇಮಕ ಮಾಡಲು ಇದು ಮೈಸೂರು ರಾಜರ ಮನೆತನ ಅಲ್ಲ. ರಾಜರ ವಂಶದಲ್ಲಿ ಉತ್ತರಾಧಿಕಾರದ ಪದ್ಧತಿ ಇರುತ್ತದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಟಾಂಗ್ ಕೊಟ್ಟಿದ್ದು ಹೀಗೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಂತೀದ್ರ ಅವರು ಹಿರಿಯ ನಾಯಕರಾಗಿದ್ದು ಇಂತಹ ಬಾಲಿಶ ಹೇಳಿಕೆ ನೀಡಬಾರದು ಎಂದು ಹೇಳಿದರು. ಉತ್ತರಾಧಿಕಾರಿ ಅಥವಾ ಮುಂದಿನ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಏನೇನೋ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತರಬಾರದು. ಇಂಥ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದರು. ಸಿಎಂ ಪುತ್ರ ಹೇಳಿಕೆ ನೀಡಿದ್ದಾರೆಂದು ಸುಮ್ಮನಿರುವುದು. ನಾವು ಯಾರಾದರೂ ಮಾತನಾಡಿದರೆ ನೋಟಿಸ್ ಕೊಡುವುದು ಸರಿಯಲ್ಲ. ಅವರು ಹಲವು ಬಾರಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.