

ದಾವಣಗೆರೆ : ಇತ್ತೀಚೆಗೆ ನಗರದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ತಪ್ಪಿತಸ್ಥರು ಯಾವುದೇ ಧರ್ಮ, ಸಮುದಾಯದವರಾದರೂ ಜಿಲ್ಲಾಡಳಿತ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಆಗ್ರಹಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ 1992 ರಲ್ಲಿ ನಡೆದ ಘಟನೆಯಿಂದ ವ್ಯಾಪಾರ-ವಹಿವಾಟು ಹಾಳಾದವು. ಇತ್ತೀಚೆಗೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಭದ್ರಾ ಜಲಾಶಯ ತುಂಬಿದ್ದು ಆರ್ಥಿಕತೆ ಚೇತರಿಕೆ ಕಂಡಿದೆ. ಇದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದರು. ಪ್ರತಾಪ್ ಸಿಂಹ, ಸಿ.ಟಿ. ರವಿ, ಬಸನಗೌಡ ಪಾಟೀಲ ಯತ್ನಾಳ ಹೀಗೆ ಯಾರನ್ನೋ ಕರೆಸಿ ಭಾಷಣ ಮಾಡಿಸಿ ಊರು ಹಾಳು ಮಾಡಲು ಹೊರಟಿದ್ದಾರೆ ಎಂದು ಬಿಜೆಪಿಯವರ ವಿರುದ್ಧ ಹರಿಹಾಯ್ದರು. ಪ್ರಚೋದನಕಾರಿ ಭಾಷಣಗಳಿಂದ ಶಾಂತಿ, ನೆಮ್ಮದಿಗೆ ಭಂಗ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಜೆಪಿಯವರು ಮಾತೆತ್ತಿದರೆ ಅನ್ಯ ಧರ್ಮೀಯರ ಬಗ್ಗೆ ಪ್ರಸ್ತಾಪಿಸುತ್ತಾರೆ. ಅದೇ ಅವರಿಗೆ ಬಂಡವಾಳ. ಗಲಾಟೆ ಹಬ್ಬಿಸಿ ಅಧಿಕಾರಕ್ಕೆ ಬರುವುದು ಬಿಜೆಪಿಯವರ ಧ್ಯೇಯವಾಗಿದೆ ಎಂದು ಆರೋಪಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಯಾರದೋ ಪರ ಅಥವಾ ವಿರುದ್ಧವಾಗಿ ಇಲ್ಲ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್ ಮುಖಂಡರಾದ ಎ. ನಾಗರಾಜ, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಅನಿತಾಬಾಯಿ ಸುದ್ದಿಗೋಷ್ಠಿಯಲ್ಲಿದ್ದರು.