ಗ್ಯಾರಂಟಿ ಯೋಜನೆ ಪ್ರಚಾರದಿಂದ ಪಕ್ಷಕ್ಕೆ ಶಕ್ತಿ

dvg-congress_20250911193534605.jpg
Published on

ದಾವಣಗೆರೆ : ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿವೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಅರಿವು ಮೂಡಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.  ನಗರದ ಎಂ.ಸಿ.ಸಿ. ‘ಎ’ ಬ್ಲಾಕ್‌ನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.  ಸರ್ಕಾರ ರಚನೆಯ ನಂತರ 6 ತಿಂಗಳ ಒಳಗಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಸಾವಿರಾರು ಕೋಟಿ ಹಣ ಫಲಾನುಭವಿಗಳ ಖಾತೆಗೆ ಹೋಗುತ್ತಿದೆ. ಇದರಿಂದ ಬಡವರಿಗೆ ಸಹಾಯವಾಗಿದೆ. ಆರ್ಥಿಕತೆಗೂ ಇದು ಪೂರಕವಾಗಿದೆ ಎಂದು ವಿಶ್ಲೇಷಿಸಿದರು.  ಸಿದ್ಧಾಂತದ ಆಧಾರದಲ್ಲಿ ಪಕ್ಷವನ್ನು ಕಟ್ಟಬೇಕಿದೆ. ಜಿಲ್ಲೆ, ಬ್ಲಾಕ್, ಗ್ರಾ.ಪಂ, ವಾರ್ಡ್ ಹಾಗೂ ಬೂತ್ ಮಟ್ಟದ ವರೆಗೂ ಸಂಘನೆಯ ಬೇರುಗಳನ್ನು ಗಟ್ಟಿಗೊಳಿಸಬೇಕಿದೆ. ಚುನಾವಣೆ ಯುದ್ಧವಿದ್ದಂತೆ. ಅದಕ್ಕಾಗಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಹೇಳಿದರು.  ಪಕ್ಷದ ಪ್ರಚಾರ ಸಮಿತಿಯು ಚುನಾವಣೆ ಸಂದರ್ಭಕ್ಕೆ ಸೀಮಿತವಾಗಿರದೇ, ವರ್ಷದ 365 ದಿನವೂ ಸಕ್ರಿಯವಾಗಿದೆ. ಜಿಲ್ಲೆಗಳ ಪ್ರವಾಸ ಮಾಡಲಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಕಾರ್ಯಶೈಲಿ ಬದಲಾಗಿದೆ. ರಾಜ್ಯಮಟ್ಟದಲ್ಲಿ ತರಬೇತಿ ಮಾಡಲಾಗಿದೆ. ವಿಭಾಗ, ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡುವ ಚಿಂತನೆಯಿದೆ ಎಂದರು.  ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಅವರನ್ನು ಕಟಕಟೆಯಲ್ಲಿ ನಿಲ್ಲಿಸಲಾಯಿತು. ಆದರೂ ಧೃತಿಗೆಡದೇ ಅವರು ದೇಶದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನಾವು ಬಿಂಬಿಸಬೇಕಿದೆ ಎಂದು ಹೇಳಿದರು.  ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ, ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿದರು.  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮುಖಂಡರಾದ ಬಿ.ಎಚ್. ವೀರಭದ್ರಪ್ಪ, ಎಸ್. ಮಲ್ಲಿಕಾರ್ಜುನ್ ಇತರರು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net