ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಪಾಕಿಸ್ತಾನ ನಿರ್ನಾಮ

dvg-Neharu.jpg
Published on

ದಾವಣಗೆರೆ :  ಎರಡು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಪಾಕಿಸ್ತಾನವನ್ನು ನಿರ್ನಾಮ ಮಾಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.  ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ, ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಹನ್ನೊಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಅಂದಿನಿಂದಲೂ ಪಾಕಿಸ್ತಾನದ ಹೆಸರು ಹೇಳಿ ರಾಜಕೀಯ ಮಾಡುತ್ತ ಬಂದಿದ್ದು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸಿದರೆ ನಮ್ಮ ಅಸ್ತಿತ್ವ ಇರುವುದಿಲ್ಲ ಎಂಬ ಭಯದಿಂದ ಆ ದೇಶದ ವಿರುದ್ಧ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.  ಜವಾಹರ್ ಲಾಲ್ ನೆಹರು ಅವರು ದೇಶದ 545 ರಾಜ್ಯಗಳನ್ನು ಒಗ್ಗೂಡಿಸಿ ಭಾರತ ಬಲಿಷ್ಠ ರಾಷ್ಟ್ರವನ್ನಾಗಿಸಲು ಸಾಕಷ್ಟು ಶ್ರಮ ಪಟ್ಟರು ಎಂದು ಸ್ಮರಿಸಿದರು.  ಮಾಜಿ ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಲಭಿಸಿದಾಗ ಒಂದು ಗುಂಡು ಸೂಜಿಯನ್ನು ಸಹ ನಿರ್ಮಾಣ ಮಾಡದಷ್ಟು ಪರಿಸ್ಥಿತಿಯಲ್ಲಿ ಇದ್ದೆವು, ಇಂದು ಬ್ರಹ್ಮೋಸ್ ತಯಾರಿಸಲು ಸಾಧ್ಯವಾಗಿದ್ದು ಪಂಡಿತ್ ನೆಹರು ಅವರ ದೂರದೃಷ್ಟಿಯಿಂದ ಎಂದು ತಿಳಿಸಿದರು. ನೆಹರು ಅವರು ಸ್ಥಾಪಿಸಿದ ಅನೇಕ ಸಂಸ್ಥೆಗಳನ್ನು ಇಂದು ಮೋದಿ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಸ್ವಾತಂತ್ರೃ ಲಭಿಸಿದಾಗ ದೇಶಕ್ಕೆ ಆಹಾರ ಉತ್ಪಾದನೆ, ಕೈಗಾರಿಕೆ, ನೀರಾವರಿ ಕಲ್ಪಿಸಲು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭಾರತವನ್ನು ಸುಭಿಕ್ಷ ರಾಷ್ಟ್ರವನ್ನಾಗಿಸಲು ನೆಹರು ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.  ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎ. ನಾಗರಾಜ್, ಸಾಗರ್, ಸೀಮೆಎಣ್ಣೆ ಮಲ್ಲೇಶ್, ಮುಖಂಡರಾದ ಗೋಪಿ ನಾಯ್ಕ, ಕೊಡಪಾನ ದಾದಾಪೀರ್, ಕವಿತಾ ಚಂದ್ರಶೇಖರ್, ದಾಕ್ಷಾಯಣಮ್ಮ, ಕಾವ್ಯಾ, ಮಹಮ್ಮದ್ ಸಮೀವುಲ್ಲಾ, ಶಹನಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net