ಬಿಜೆಪಿಗರಿಂದ ಸಾಮರಸ್ಯ ಕದಡುವ ಕೆಲಸ

IMG-20240910-WA0142.jpg
Published on

ದಾವಣಗೆರೆ :  ನಗರದ ಜನತೆ ಸಾಮರಸ್ಯದಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಆದರೆ, ಬಿಜೆಪಿಗರು ಜಾತಿ, ಧರ್ಮದ ಹೆಸರಿನಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದರು.  ದಾವಣಗೆರೆಯಲ್ಲಿ 400ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಜಿಲ್ಲಾಡಳಿತ ಯಾವುದೇ ತೊಂದರೆಯಾಗದಂತೆ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಜಾತ್ರೆ, ಉತ್ಸವ ಹಾಗೂ ಹಬ್ಬಗಳ ಸಂದರ್ಭದಲ್ಲಿ ಸರ್ಕಾರಗಳು ಸಂವಿಧಾನ ಮತ್ತು ಕಾನೂನಿನಡಿ ಕೆಲವು ನಿಬಂಧನೆ ಹೊರಡಿಸುವುದು ಸಹಜ. ಹಬ್ಬಗಳ ಆಚರಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಒಂದೇ ರೀತಿಯ ಕಾನೂನುಗಳಿವೆ ಎಂದರು.  ರಾಜ್ಯದ ಕೆಲವೆಡೆ ಪ್ರಸಾದ ಸೇವನೆ ಸಂದರ್ಭದಲ್ಲಿ ಅವಘಡ ಸಂಭವಿಸಿದ ಕಾರಣ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದೆ. ಸಾಮರಸ್ಯ ಕದಡುವುದೇ ಬಿಜೆಪಿಗರ ಉದ್ದೇಶವಾಗಿದೆ. ಜಾತಿ, ಧರ್ಮದ ಮೇಲೆ ಬಡವರ ಮಕ್ಕಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.  ರಾಮಮಂದಿರ ಹೆಸರಿನಲ್ಲಿ ಬೆಳ್ಳಿ ಇಟ್ಟಿಗೆಗೆ ಹಣ ಮತ್ತು ಬೆಳ್ಳಿ ಸಂಗ್ರಹಿಸಿದವರು ರಾಮ ಮಂದಿರ ಟ್ರಸ್ಟ್‌ಗೆ ಬೆಳ್ಳಿ ಇಟ್ಟಿಗೆ ನೀಡಿದ್ದಾರೆಯೇ? ಎಂಬುದನ್ನು ಸಾರ್ವಜನಿಕವಾಗಿ ತಿಳಿಸಲಿ. ಧರ್ಮದ ವಿಷಯದಲ್ಲಿ ಸಾಮರಸ್ಯ ಕದಡುವ ಕೆಲಸ ಮಾಡಬಾರದು ಎಂದು ಹೇಳಿದರು.  ನಗರದಲ್ಲಿ ಯಾರಾದರೂ ಸಾಮರಸ್ಯ ಕದಡುವ ಪ್ರಯತ್ನ ನಡೆಸಿದರೆ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.  ಕಾಂಗ್ರೆಸ್ ಮುಖಂಡರಾದ ಎಸ್.ಎಲ್. ಆನಂದಪ್ಪ, ಬಕ್ಕೇಶ್ ಅಭಿ ಕಾಟನ್, ವೀರಭದ್ರಸ್ವಾಮಿ ಮಟ್ಟಿಕಲ್, ಪ್ರತಾಪ್, ಅಡಾಣಿ ಸಿದ್ದಪ್ಪ, ಅಣಜಿ ಬಸವರಾಜ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net