

ದಾವಣಗೆರೆ : ವಿಧಾನ ಪರಿಷತ್ ಚುನಾವಣೆಯಲ್ಲಿ ಬೇರೆ ಪಕ್ಷದವರನ್ನು ಆಯ್ಕೆ ಮಾಡಿದರೆ ಅವರು ಮೇಲ್ಮನೆಯಲ್ಲಿ ಸುಮ್ಮನೆ ಬಂದು ಕೂಡಬೇಕಾಗುತ್ತದೆಯೆ ಹೊರತು ಸ್ಪಂದನೆ ಇರುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಮತದಾರರಿ ಇದನ್ನೆಲ್ಲ ಯೋಚಿಸಿ ಮತದಾನ ಮಾಡಬೇಕು ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ್ ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಅನುಭವಿಯಾಗಿದ್ದಾರೆ. ಕೆಎಎಸ್ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿ ಶಿಕ್ಷಕರು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಶಿಕ್ಷಕರು ಮತ್ತು ಸರ್ಕಾರಿ ನೌಕರರ ಹಿತವನ್ನು ಕಾಪಾಡುತ್ತದೆ. 7ನೇ ವೇತನ ಆಯೋಗದ ವರದಿ ಜಾರಿ, ಒಪಿಎಸ್ ಪದ್ಧತಿ ಮರುಸ್ಥಾಪನೆ, ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸ ಆಗಲಿದೆ ಎಂದರು.
ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಎ. ನಾಗರಾಜ್ ಇದ್ದರು.
...
(ಬಾಕ್ಸ್)
ಫಲಿತಾಂಶದ ಬಗ್ಗೆ ಯೋಚನೆ ಮಾಡಿಲ್ಲ
ಲೋಕಸಭಾ ಚುನಾವಣೆಯ ಫಲಿತಾಂಶ ಹಾಗೂ ಅಂತರದ ಬಗ್ಗೆ ಯೋಚನೆ ಮಾಡಿಲ್ಲ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ, ಜನರು ಅಧಿಕಾರ ಕೊಟ್ಟರೆ ಕೆಲಸ ಮಾಡುತ್ತೇವೆ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಶಾಸಕರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದ ಚುನಾವಣೆ ಮಾಡಿದಂತೆ ಆಗಿದೆ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳು, ಶಾಸಕರ ಬಲ ನಮಗೆ ಇದೆ. 20 ವರ್ಷಗಳಿಂದ ಕಾಂಗ್ರೆಸ್‌ನ ಲೋಕಸಭಾ ಸದಸ್ಯರನ್ನು ನೋಡಿಲ್ಲ. ಈ ಬಾರಿ ನೋಡೇ ನೋಡುತ್ತೇವೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಇದಕ್ಕೂ ಮೊದಲು ಪ್ರತಿಕ್ರಿಯೆ ನೀಡಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಡಾ. ಪ್ರಭಾ ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.