ಬಿಜೆಪಿ ಆಡಳಿತ ಅವಧಿಯಲ್ಲಿ ಹಲವು ಅಕ್ರಮ

IMG-20230803-WA0112.jpg
Published on

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಹಲವು ಅಕ್ರಮಗಳು ನಡೆದಿದ್ದು, ಉದ್ಯಾನದ ಜಾಗವನ್ನು ಕಬಳಿಸಲಾಗಿದೆ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಆರೋಪಿಸಿದರು.
 ಪಾಲಿಕೆಯ ಸದಸ್ಯ ಎ.ನಾಗರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮ ಎಸಗಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ತಿಳಿಸಿದರು.
 ಎಸ್.ಎಸ್. ಬಡಾವಣೆಯಲ್ಲಿ ಆಸ್ಪತ್ರೆ, ಉದ್ಯಾನ ಅಥವಾ ಶಾಲೆ ಸೇರಿ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಕಬಳಿಸಿದ್ದು, 4 ನಿವೇಶನಗಳನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಈಗಾಗಲೇ ಈ ನಿವೇಶನಗಳಿಗೆ ಡೋರ್ ನಂಬರ್ ಕೊಟ್ಟು ಖಾತೆ ಕೂರಿಸಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೂ ನೋಂದಣಿ ಆಗಿದೆ ಎಂದು ಮಾಹಿತಿ ನೀಡಿದರು.
 ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಉಪ ಆಯುಕ್ತರ ಗಮನಕ್ಕೂ ತರದೆ ಈ ಕೆಲಸಗಳು ನಡೆದಿವೆ. ಈ ಸಂಬಂಧ ಆಯುಕ್ತರು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದ್ದು, 3 ದಿನಗಳಲ್ಲಿ ದಾಖಲೆ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೆಲವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
 ಪಾಲಿಕೆ ಸದಸ್ಯರೊಬ್ಬರು ಅವರ ಪತ್ನಿ ಹಾಗೂ ಅತ್ತಿಗೆ ಹೆಸರಿಗೆ ಉದ್ಯಾನದ ಜಾಗವನ್ನು ನೋಂದಣಿ ಮಾಡಿಸಿಕೊಂಡಿದ್ದು, ಈ ನಿವೇಶನಗಳನ್ನು ನೋಂದಣಿ ಮಾಡಿಸಿದ ಉಪ ನೋಂದಣಾಧಿಕಾರಿ ಅವರ ಸಂಬಂಧಿಕರೇ ಆಗಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು. ಅವರನ್ನು ಅಮಾನತು ಮಾಡಬೇಕು ಎಂದು ಮತ್ತೊಬ್ಬ ಸದಸ್ಯ ಗಡಿಗುಡಾಳ್ ಮಂಜುನಾಥ್ ಆರೋಪಿಸಿದರು.
 ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸರ್ಕಾರಿ ಜಾಗಗಳನ್ನು ಸರ್ಕಾರದ ವಶಕ್ಕೆ ಮರಳಿ ಪಡೆಯಬೇಕು. ಪಾಲಿಕೆ ಸ್ವತ್ತುಗಳಿಗೆ ಫಲಕ ಅಳವಡಿಸಬೇಕು ಎಂದು ಆಗ್ರಹಿಸಿದರು.
 ಸಾರ್ವಜನಿಕ ಕೆಲಸ ಮಾಡಿಕೊಡಲು ಪಾಲಿಕೆಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಸಣ್ಣಪುಟ್ಟ ತಪ್ಪುಗಳಿದ್ದರೂ ಅದನ್ನು ತಿದ್ದುಪಡಿ ಮಾಡಲು 10 ಸಾವಿರದಿಂದ 20 ಸಾವಿರ ರೂ. ಲಂಚ ಕೇಳುತ್ತಾರೆ. ದಾಖಲೆ ಸರಿ ಇದ್ದರೆ ಸಾರ್ವಜನಿಕರಿಗೆ ವಿಳಂಬ ಮಾಡದೇ ಕೆಲಸಗಳನ್ನು ಮಾಡಿಕೊಡಬೇಕು ಎಂದು ಹಿರಿಯ ಸದಸ್ಯ ಚಮನ್‌ಸಾಬ್ ಹೇಳಿದರು.
 ಮುಖಂಡರಾದ ನಾಗರಾಜ್ ಪಾಮೇನಹಳ್ಳಿ, ಉದಯ ಕುಮಾರ್, ಉಮೇಶ್, ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net