

ದಾವಣಗೆರೆ : ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಬಿಜೆಪಿಗರು ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್‌ನ ಜಿಲ್ಲಾ ಮುಖಂಡರು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಆಸ್ಸಾಂನಲ್ಲಿ ಸಾಗುತ್ತಿದ್ದ ಯಾತ್ರೆಯನ್ನು ತಡೆದಿದ್ದ ಬಿಜೆಪಿ ಕಾರ್ಯಕರ್ತರನ್ನು ಸೇರಿದಂತೆ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ಸಿಗರು ಘೋಷಣೆ ಕೂಗಿದರು.e
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಬಿಜೆಪಿಯ ಸುಳ್ಳು ಭರವಸೆ, ಜಾತಿ ರಾಜಕಾರಣ, ಭ್ರಷ್ಟ ಅಧಿಕಾರವನ್ನು ಜನರಿಗೆ ತಿಳಿಸಲು, 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ಹೊರಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಯಾತ್ರೆ ತಡೆಯುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಆಸ್ಸಾಂನಲ್ಲಿ ನಮ್ಮ ನಾಯಕರ ಪಾದಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಬೆದರಿಕೆಯೊಡ್ಡಿ ಯಾತ್ರೆಗೆ ಅಡ್ಡಿಪಡಿಸಿದ್ದಾರೆ. ಇಂತಹ ಬಿಜೆಪಿ ಬೆದರಿಕೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು ಸಮರ್ಥರು ಇದ್ದಾರೆ, ನಾವೂ ರಾಜ್ಯದಲ್ಲಿ ಬಿಜೆಪಿ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವ ಕಾರ್ಯ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ಸಂದೇಶ ನೀಡಿದರು.
ರಾಹುಲ್ ಗಾಂಧಿಯವರ ಬೆನ್ನಿಗೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ನಮ್ಮ ನಾಯಕರ ತಂಟೆಗೆ ಬಂದರೆ ಅದರ ಪರಿಣಾಮ ಬಿಜೆಪಿ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ನಮ್ಮ ನಾಯಕ ರಾಹುಲ್ ಗಾಂಧಿ ಯಾತ್ರೆಗೆ ಬಿಜೆಪಿಗರು ಅಡ್ಡಿ ಮಾಡಿದರೆ ಕಾಂಗ್ರೆಸ್ಸಿಗರು ಬೀದಿಗಿಳಿದು ಹೋರಾಟ ಮಾಡುತ್ತೇವೆ. ನ್ಯಾಯ ಯಾತ್ರೆ ಯಶಸ್ವಿ ಆದರೆ ಮೋದಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಹೇಳಿದರು.
ರಾಮ ಮಂದಿರ ಲೋಕಾರ್ಪಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಒಂದು ಬ್ಯಾರಿಕೇಡ್ ಹಿಂಭಾಗ ನಿಂತಿದ್ದು, ದೇಶಕ್ಕೆ ಅಗೌರವ ತಂದಿದೆ ಎಂದರು.
ಪಕ್ಷದ ಮುಖಂಡ ಶಿವಕುಮಾರ್ ಒಡೆಯರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ದಿನೇಶ್ ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ರಾಜ್ಯ ಎಸ್‌ಟಿ ಘಟಕದ ಅಧ್ಯಕ್ಷ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಶಿರ್, ಅಭಿದ್ ಅಲಿ, ಆಯುಬ್ ಪೈಲ್ವಾನ್, ಗುರುರಾಜ್, ಚಮನ್‌ಸಾಬ್, ಮೈನುದ್ದಿನ್ ಮಹಿಳಾ ಮುಖಂಡರು ಮತ್ತು ಇತರರು ಇದ್ದರು.