ದಾವಣಗೆರೆ ಒನ್ ಕೇಂದ್ರಕ್ಕೆ ಕಾಂಗ್ರೆಸ್ ತಂಡ ಭೇಟಿ

DVG-NIYOGA-JULY-25.jpg
Published on

ದಾವಣಗೆರೆ : ನಗರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಾವಣಗೆರೆ ಒನ್ ಕೇಂದ್ರಕ್ಕೆ ಜಿಲ್ಲಾ ಕಾಂಗ್ರೆಸ್ ಪಕ್ಷದ ನಿಯೋಗ ಭೇಟಿ ನೀಡಿ ಮಹಿಳೆಯರು ಆತಂಕಕ್ಕೆ ಒಳಗಾಗದೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿತು.
 ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮತ್ತು ಪಾಲಿಕೆ ಸದಸ್ಯ ಎ.ನಾಗರಾಜ್ ನೇತೃತ್ವದ  ನಿಯೋಗ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.
 ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಯಾರೊಬ್ಬರೂ ಹಣ ನೀಡುವ ಅಗತ್ಯವಿಲ್ಲ. ಇದು ಸಂಪೂರ್ಣ ಉಚಿತವಾಗಿರಲಿದೆ.  ಅರ್ಜಿ ಸಲ್ಲಿಕೆಗೆ ಯಾರಾದರೂ ಹಣ ನೀಡುವಂತೆ ಒತ್ತಾಯಿಸಿದರೆ ನಮ್ಮ ಗಮನಕ್ಕೆ ತನ್ನಿ. ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸಬೇಕು, ಸರ್ಕಾರದ ಯೋಜನೆಗಳ ಗರಿಷ್ಠ ಲಾಭ ಫಲಾನುಭವಿಗಳಿಗೆ ಸಿಗಬೇಕು ಎಂಬುದು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಆಶಯವಾಗಿದೆ ಎಂದು ನಿಯೋಗದ ಮುಖಂಡರು ತಿಳಿಸಿದರು.
 ಸದ್ಯಕ್ಕೆ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ಮಾಡಲಾಗುತ್ತಿದೆ. ಯೋಜನೆಯ ನೋಂದಣಿಗಾಗಿ ಪ್ರಜಾಪ್ರತಿನಿಧಿಗಳನ್ನು ಸರ್ಕಾರ ಶೀಘ್ರ ನೇಮಕ ಮಾಡಿಕೊಳ್ಳಲಿದೆ. ಬಳಿಕ ಪ್ರಜಾಪ್ರತಿನಿಧಿಗಳೇ ಮನೆಮನೆಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದರು.
 ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಬ್ಯಾಂಕ್ ಹನುಮಂತಪ್ಪ, ಗೋಪಾಲ್, ಆರೋಗ್ಯ ಸ್ವಾಮಿ, ಸತೀಶ್ ಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net