ಭಗತ್‌ಸಿಂಗ್ ಉದ್ಯೋಗ ಖಾತ್ರಿ ಕಾಯ್ದೆ

dvg-AIYF.jpg
Published on

ದಾವಣಗೆರೆ  : ರಾಷ್ಟ್ರೀಯ ಭಗತ್‌ಸಿಂಗ್ ಉದ್ಯೋಗ ಖಾತ್ರಿ ಕಾಯ್ದೆಯನ್ನು ದೇಶದ ನಗರ ಪ್ರದೇಶಗಳಲ್ಲಿ ಜಾರಿಗೊಳಿಸಬೇಕು ಎಂದು ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಆಗ್ರಹಿಸಿದರು.  ನಗರದ ಪಂಪಾಪತಿ ಭವನದಲ್ಲಿ ಭಾನುವಾರ, ಅಖಿಲ ಭಾರತ ಯುವಜನ ಫೆಡರೇಶನ್‌ನ 11ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಗತ್‌ಸಿಂಗ್, ರಾಜಗುರು, ಸುಖದೇವ್ ಕಂಡಿದ್ದ ಕನಸನ್ನು ಸಾಕಾರಗೊಳಿಸಬೇಕು ಎಂದು ಒತ್ತಾಯಿಸಿದರು.  ದೇಶದಲ್ಲಿ ಧರ್ಮ, ಕೋಮುವಾದ, ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ದಬ್ಬಾಳಿಕೆ ನಡೆಸುತ್ತ ಬಂಡವಾಳಶಾಹಿ ವ್ಯವಸ್ಥೆ ಪ್ರಭುತ್ವ ಸಾಧಿಸುತ್ತಿದೆ. ಬಂಡವಾಳಶಾಹಿ, ವೈದಿಕಶಾಹಿ ವ್ಯವಸ್ಥೆಯಿಂದ ಯುವ ಜನಾಂಗ ಜಾಗೃತಗೊಂಡು ಸಂವಿಧಾನಬದ್ಧ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.  ಸರ್ಕಾರಿ ಸ್ವಾಮ್ಯದಲ್ಲಿನ ಕಂಪನಿಗಳು ಖಾಸಗೀಕರಣಗೊಳ್ಳುತ್ತಿವೆ. ಇದರಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಸರ್ಕಾರಿ ಶಾಲೆ, ಆಸ್ಪತ್ರೆ, ರೈಲ್ವೆ, ಬ್ಯಾಂಕಿಂಗ್ ಕ್ಷೇತ್ರಗಳನ್ನು ಖಾಸಗೀಕರಣದಿಂದ ತಪ್ಪಿಸಬೇಕು ಎಂದು ಹೇಳಿದರು.  ಸನಾತನ ಧರ್ಮದ ಸಂಸ್ಕೃತಿಯ ಮೇಲೆ ರಾಷ್ಟ್ರ ಕಟ್ಟುವುದು ದೇಶಪ್ರೇಮವಲ್ಲ, ಮಹಿಳೆಯರಿಗೆ ಸಮಾನತೆ, ಬಹುತ್ವ ಉಳಿಸುವುದು, ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವುದು, ಯುವಜನರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.  ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಯುವಕರು ಬದುಕಿನ ಹಕ್ಕಿಗಾಗಿ ಹೋರಾಟ ಮನೋಭಾವ ಮೈಗೂಡಿಸಿಕೊಳ್ಳಬೇಕಿದೆ. ಸಮಾಜದಲ್ಲಿ ಅಶಾಂತಿ, ಅಸಮಾನತೆ, ನಿರುದ್ಯೋಗ ತಾಂಡವಾಡುತ್ತಿದ್ದು ಸಂಘಟಿತ ಹೋರಾಟ ನಡೆಸಬೇಕಿದೆ. ರಾಜಕೀಯ ಪ್ರಜ್ಞೆ ಅಳವಡಿಸಿಕೊಂಡು ದೇಶದ ಹಿತ ಕಾಯುವ ಪಕ್ಷವನ್ನು ಆಡಳಿತಕ್ಕೆ ತರಬೇಕು ಎಂದು ಅಭಿಪ್ರಾಯಪಟ್ಟರು.  ಕೇಂದ್ರದ ಬಿಜೆಪಿಯವರು ಚುನಾವಣೆ ವೇಳೆ, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದು ಹುಸಿಯಾಗಿದೆ. ಬಡವರು, ಶೋಷಿತರು, ಮಹಿಳೆಯರು, ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರ ಹಕ್ಕುಗಳನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.  ಕಾಂ. ಸುರೇಶ್ ಶೇಖರಪ್ಪ ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ನ ಖಜಾಂಚಿ ಯಲ್ಲಪ್ಪ ಧ್ವಜಾರೋಹಣ ಮಾಡಿದರು. ಇಪ್ಟಾ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಖ ಸ್ವಾಮಿ, ವಿ. ಲಕ್ಷ್ಮಣ, ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಸರೋಜಾ, ಕೃಷಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಗಾ ರಂಗನಾಥ, ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಚಂದ್ರು, ಎಐಎಸ್‌ಎಫ್ ಜಿಲ್ಲಾಧ್ಯಕ್ಷ ಮಾದಿಹಳ್ಳಿ ಮಂಜುನಾಥ, ಇಪ್ಟಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಬಾನಪ್ಪ, ಎಐವೈಎಫ್ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು ಮಾತನಾಡಿದರು. ಎ. ತಿಪ್ಪೇಶ್ ಸ್ವಾಗತಿಸಿದರು. ಮಳಲಕೆರೆ ರುದ್ರೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net