

ದಾವಣಗೆರೆ : ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ಬೇರುಗಳನ್ನು ಗಟ್ಟಿಗೊಳಿಸುವ ಆಶಯದೊಂದಿಗೆ ಸೋಮವಾರ ಮತ್ತು ಮಂಗಳವಾರ ನಡೆಯಲಿರುವ, ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನಕ್ಕೆ ಮಧ್ಯ ಕರ್ನಾಟಕದ ದಾವಣಗೆರೆ ಸಜ್ಜಾಗಿದೆ. ಹದಿನಾರು ವರ್ಷಗಳ ನಂತರ ಪಂಚ ಪೀಠದ ಐವರು ಜಗದ್ಗುರುಗಳು ಒಂದೇ ವೇದಿಕೆಯಲ್ಲಿ ಸಮಾಗಮಗೊಳ್ಳಲಿದ್ದಾರೆ. ಜತೆಗೆ 500ಕ್ಕೂ ಹೆಚ್ಚು ಶಿವಾಚಾರ್ಯರು ಕರ್ನಾಟಕ ಅಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಉತ್ತರಾಂಚಲ, ಗೋವಾ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಲಿದ್ದಾರೆ. ಸಾವಿರಾರು ಭಕ್ತರು ಈ ಅಪರೂಪದ ಸಂದರ್ಭವನ್ನು ಸಾಕ್ಷೀಕರಿಸಲಿದ್ದಾರೆ. ಶೃಂಗ ಸಮ್ಮೇಳನ ನಡೆಯಲಿರುವ ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಶಿವಾಚಾರ್ಯರಿಗೆ ಪೂಜೆ, ಪ್ರಸಾದ, ಅವರು ತಂಗಲು ವಿವಿಧ ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆಯಾಗಿದೆ. ಗಣ್ಯರಿಗೆ ಅತಿಥಿಗೃಹ ಹಾಗೂ ಹೋಟೆಲ್‌ಗಳಲ್ಲಿ ವಸತಿ ಏರ್ಪಾಟು ಮಾಡಲಾಗಿದೆ. ಹೆಚ್ಚು ಭಕ್ತರು ವೀಕ್ಷಿಸಲು ಅನುಕೂಲವಾಗುವಂತೆ ರೇಣುಕ ಮಂದಿರದ ಆವರಣದಲ್ಲಿ ಜರ್ಮನ್ ಟೆಂಟ್ ನಿರ್ಮಿಸಿ 8 ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ಪಕ್ಕದ ಹೈಸ್ಕೂಲ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯಾಗಿದೆ. ಭಕ್ತರಿಗೆ ರೇಣುಕ ಮಂದಿರದಲ್ಲಿ ದಾಸೋಹ ಇರಲಿದೆ. ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ‘ಪಂಚ ಪೀಠಾಧೀಶ್ವರರು ಒಂದೇ ವೇದಿಕೆಯಲ್ಲಿ ಸೇರಲಿ ಎಂದು ಭಕ್ತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಅವರ ಆಸೆ ಈಡೇರುತ್ತಿದೆ. ದಾವಣಗೆರೆಯಲ್ಲಿ ನಡೆಯುತ್ತಿರುವ ಶೃಂಗ ಸಮ್ಮೇಳನ ಐತಿಹಾಸಿಕ ಸಂದರ್ಭವಾಗಿದೆ’ ಎಂದು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಆರ್.ಟಿ. ಪ್ರಶಾಂತ್ ತಿಳಿಸಿದರು.