

ದಾವಣಗೆರೆ : ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನದ ವಿರುದ್ಧ ಧ್ವನಿ ಎತ್ತಲು ‘ಒಕ್ಕೂಟ ಉಳಿಸಿ ಆಂದೋಲನ’ ನಡೆಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಸೆ. 14ರಂದು ರಾಷ್ಟ್ರೀಯ ಸಂಚಲನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ಸಾಹಿತಿ ದೇವನೂರು ಮಹಾದೇವ, ಚಿಂತಕ ಜಿ.ರಾಮಕೃಷ್ಣ, ವಕೀಲ ಪ್ರೊ.ರವಿವರ್ಮ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಬಹುತ್ವ ಭಾರತದ ಅಸ್ಮಿತೆಗಳಾದ ಭಾಷೆ, ಸಂಸ್ಕೃತಿ, ಧರ್ಮ ವಿನಾಶಗೊಳಿಸುವ ಶಕ್ತಿಗಳು ದೇಶದಲ್ಲಿ ವಿಜೃಂಭಿಸುತ್ತಿವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಅಸ್ಥಿರಗೊಳಿಸುವ ಹುನ್ನಾರಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಧರ್ಮವನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಆಕ್ರಮಣ ನಡೆಸುತ್ತಿದೆ. ನಿರ್ದಿಷ್ಟ ಸಮುದಾಯವನ್ನು ಈ ದೇಶಕ್ಕೆ ಸಂಬಂಧಪಟ್ಟವರಲ್ಲವೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಏಕಾತ್ಮಕತೆ ಬಿತ್ತಲಾಗುತ್ತಿದೆ ಎಂದು ದೂರಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಅನುಮಾನಾಸ್ಪದವಾಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ತಪ್ಪಲ್ಲ, ಆದರೆ, ತರಾತುರಿಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಆಕ್ಷೇಪವಿದೆ. ಕೇಂದ್ರ ಸರ್ಕಾರವು ರಾಜ್ಯಪಾಲರ ಮೇಲೆ ಒತ್ತಡ ಹೇರಿದೆ. ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದರು. ಲೇಖಕರಾದ ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹನಗವಾಡಿ, ಎಂ.ಟಿ. ಸುಭಾಶ್ಚಂದ್ರ, ಬಿ.ವೀರಣ್ಣ, ಪ್ರೊ.ಎ.ಬಿ. ರಾಮಚಂದ್ರಪ್ಪ, ನಿರಂಜನ್ ಇದ್ದರು.