

ವಿಜಯವಾಣಿ ಸುದ್ದಿಜಾಲ ದಾವಣಗೆರೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಎರಡು ದಿನಗಳ ರಾಜ್ಯ ಮಟ್ಟದ 38ನೇ ಸಮ್ಮೇಳನಕ್ಕೆ ಭಾನುವಾರ ತೆರೆ ಬಿದ್ದಿತು.
ನಾಡಿನ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಪತ್ರಕರ್ತರು ಈ ಸಮ್ಮೇಳನಕ್ಕೆ ಸಾಕ್ಷಿಯಾದರು. ಪ್ರತಿನಿಧಿಗಳ ಸಮಾವೇಶದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಒಟ್ಟು ನಾಲ್ಕು ಗೋಷ್ಠಿಗಳಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಸ್ತುತ ಬೆಳವಣಿಗೆಗಳು, ಸವಾಲುಗಳು, ಪರಿಹಾರೋಪಾಯಗಳ ಕುರಿತು ಚಿಂತನ ಮಂಥನ ನಡೆಸಲಾಯಿತು. ಇದೇ ವೇಳೆ ಸಾಧಕ ಪತ್ರಕರ್ತರನ್ನು ಸನ್ಮಾನಿಸಲಾಯಿತು.
...
* ವಿಧಾನ ಪರಿಷತ್‌ನಲ್ಲಿ ಪ್ರಾತಿನಿಧ್ಯ
‘ಚಿಂತಕರ ಚಾವಡಿ’ ಎನಿಸಿರುವ ಮೇಲ್ಮನೆಯಲ್ಲಿ ಮಾಧ್ಯಮ ಕ್ಷೇತ್ರದ ಪ್ರತಿನಿಧಿಯೊಬ್ಬರನ್ನು ನಾಮ ನಿರ್ದೇಶನ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಿಕ್ಷಣ, ಸಾಹಿತ್ಯ, ಸಂಗೀತ, ಚಿತ್ರಕಲೆ ಇನ್ನಿತರ ಕ್ಷೇತ್ರಗಳಿಗೆ ಪ್ರಾತಿನಿಧ್ಯ ಇರುವಂತೆ ಪತ್ರಕರ್ತರಿಗೂ ಪ್ರಾತಿನಿಧ್ಯದ ಅವಕಾಶವಿದೆ. ಈ ಹಿಂದೆ ಖಾದ್ರಿ ಶಾಮಣ್ಣ ಅವರು ವಿಧಾನ ಪರಿಷತ್‌ನಲ್ಲಿದ್ದರು. ಅದೇ ರೀತಿ ವಿವಿಧ ರಂಗಗಳ ಸಾಧಕರನ್ನು ಮೇಲ್ಮನೆಗೆ ನಾಮ ನಿರ್ದೇಶನ ಮಾಡಿದ್ದನ್ನು ನೆನಪಿಸಿದರು.
ಚುನಾವಣೆಯಲ್ಲಿ ಸೋತವರು, ಹಿಂಬಾಲಕರು ಅಂಥವರೇ ಮೇಲ್ಮನೆಗೆ ಬಂದರೆ ಮುನ್ಸಿಪಾಲಿಟಿಗೂ ಇದಕ್ಕೂ ವ್ಯತ್ಯಾಸ ಇಲ್ಲದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣಬಲ ಉಳ್ಳವರೇ ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಮಾಧ್ಯಮಗಳಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಬಿ.ಪಿ. ಹರೀಶ್, ಕೆ.ಎಸ್. ಬಸವಂತಪ್ಪ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕಾ ಇದ್ದರು.
...
* ತುಮಕೂರಿನಲ್ಲಿ ಮುಂದಿನ ಸಮ್ಮೇಳನ
ಪತ್ರಕರ್ತರ ರಾಜ್ಯಮಟ್ಟದ 39ನೇ ಸಮ್ಮೇಳನವನ್ನು ಕಲ್ಪತರು ನಾಡು ತುಮಕೂರಿನಲ್ಲಿ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಭಾನುವಾರ ನಡೆದ ಪ್ರತಿನಿಧಿಗಳ ಸಮಾವೇಶದಲ್ಲಿ, ಮುಂದಿನ ಸಮ್ಮೇಳನ ಆಯೋಜಿಸಲು ತುಮಕೂರು, ಶಿವಮೊಗ್ಗ ಹಾಗೂ ಗಡಿ ಭಾಗದ ರಾಯಚೂರು ಜಿಲ್ಲೆಯಿಂದ ಬೇಡಿಕೆ ಬಂದಿತು. ಈಗಾಗಲೇ ಗಡಿ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಕರಾವಳಿ ಭಾಗದಲ್ಲಿ ಸಮ್ಮೇಳನ ನಡೆಸಿರುವುದರಿಂದ ತುಮಕೂರು ಜಿಲ್ಲೆಯನ್ನು ಹಮ್ಮಿಕೊಳ್ಳಲು ಅಂತಿಮ ತೀರ್ಮಾನಕ್ಕೆ ಬರಲಾಯಿತು.
...
(((ನಿರ್ಣಯಗಳು)))
* ಎಲ್ಲ ಕಾರ್ಯನಿರತ ಪತ್ರಕರ್ತರಿಗೂ ಬಸ್ ಪಾಸ್ ನೀಡಬೇಕು
* ಆರೋಗ್ಯ ಕ್ಷೇಮಾಭಿವೃದ್ಧಿ ಯೋಜನೆ ಆರಂಭಿಸಬೇಕು
* ತಾಲೂಕು ಮಟ್ಟದಲ್ಲಿ ಕಾರ್ಯನಿರತ ಪತ್ರಕರ್ತರ ಘಟಕ ಸ್ಥಾಪಿಸಬೇಕು
* ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು
* ಪಿಯುಸಿ, ಪದವಿ ಓದುತ್ತಿರುವ ಪತ್ರಕರ್ತರ ಮಕ್ಕಳಿಗೆ ಲ್ಯಾಪ್‌ಟಾಪ್ ಕೊಡಬೇಕು
* ಪತ್ರಕರ್ತರು ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ನೀಡಬೇಕು
* ಟೋಲ್‌ನಲ್ಲಿ ಉಚಿತ ಪ್ರವೇಶ ಒದಗಿಸಬೇಕು
* ಪತ್ರಕರ್ತರ ಮುಂದಿನ ಸಮ್ಮೇಳನ ಆಯೋಜಿಸಲು 50 ಲಕ್ಷ ರೂ. ನೀಡಬೇಕು ಎಂಬ ಹಕ್ಕೊತ್ತಾಯದ ಜತೆಗೆ ಪ್ರಸಕ್ತ ಸಮ್ಮೇಳನದಲ್ಲಿ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಿದ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕ್ರಿಕೆಟ್ ಟೂರ್ನಿ ನಡೆಸಿದ ಮಂಗಳೂರು ಸಂಘವನ್ನು ಅಭಿನಂದಿಸಲಾಯಿತು.
...
(ಕೋಟ್)
ಪತ್ರಿಕೋದ್ಯಮದ ದಿಕ್ಕು ಹಳ್ಳ ಹಿಡಿಯುತ್ತಿದೆ. ಪತ್ರಿಕೆಗಳ ಓದುಗರು ಮತ್ತು ಸುದ್ದಿ ವಾಹಿನಿಗಳ ವೀಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾಗುತ್ತಿದ್ದು ಅವುಗಳ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಪತ್ರಿಕೆಗಳು ನಶಿಸಿ ಹೋಗುವುದಕ್ಕೂ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು. ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚಿಸಲು ಪ್ರಯತ್ನಗಳಾಗಬೇಕಿದೆ. ಈ ನಿಟ್ಟಿನಲ್ಲಿ ಮನೆಗಳಲ್ಲಿ ಪತ್ರಿಕೆ ಓದುವವರ ಸಖ್ಯೆ ಜಾಸ್ತಿಯಾಗಬೇಕು. ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಸರ್ಕಾರ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿ ಒಂದು ಅವಧಿಯನ್ನು ಮೀಸಲಿಡಬೇಕು. ಮಕ್ಕಳು ಪ್ರತಿ ದಿನ ಪತ್ರಿಕೆಗಳನ್ನು ಓದಿಕೊಂಡು ಬರಬೇಕು, ಅದರಲ್ಲಿನ ಒಳ್ಳೆಯ ಅಂಶಗಳನ್ನು ಶಾಲೆಗಳಲ್ಲಿ ಚರ್ಚಿಸಬೇಕು ಎನ್ನುವ ನಿಯಮ ಜಾರಿಗೆ ತರಬೇಕು.
ಕೆ.ಎನ್. ಚನ್ನೇಗೌಡ, ಸಂಪಾದಕರು, ವಿಜಯವಾಣಿ
...
(ಕೋಟ್)
ಬಾಲಿವುಡ್ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿ ಸಾವಿನ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿಬಿಟ್ಟರು. ಆದರೆ, ಪೂನಂ ಪಾಂಡೆ ಬದುಕಿದ್ದಾರೆ. ಸಾವಿನ ಸುದ್ದಿಯನ್ನಾದರೂ ಪ್ರಕಟಿಸುವ ಮೊದಲು ಪರಿಶೀಲಿಸಿಕೊಳ್ಳದಿದ್ದರೆ ಹೇಗೆ?. ಇಂಥ ಪ್ರಕರಣಗಳಿಂದ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಉಳಿಯಲು ಸಾಧ್ಯವಿಲ್ಲ. ಪತ್ರಕರ್ತರ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವೆ.
ಕೆ.ವಿ. ಪ್ರಭಾಕರ್, ಸಿಎಂ ಮಾಧ್ಯಮ ಸಲಹೆಗಾರ
...