

ದಾವಣಗೆರೆ : ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ನಗರದ ಬಡಾವಣೆ ಠಾಣೆಯಲ್ಲಿ ಸೋಮವಾರ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ ತುಣುಕು ಆಧರಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ದೂರು ನೀಡಿದ್ದಾರೆ. ಭಾನುವಾರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಮತದಾನ ಸಮಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ರಮೇಶ ಕತ್ತಿ, ಜಾರಕಿಹೊಳಿ ಸಹೋದರರನ್ನು ಟೀಕಿಸುವ ಭರದಲ್ಲಿ ಇಡೀ ವಾಲ್ಮೀಕಿ ಸಮುದಾಯಕ್ಕೆ ಅವಾಚ್ಯ ಪದ ಬಳಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶೀಘ್ರದಲ್ಲೇ ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದೂ ವೀರಣ್ಣ ತಿಳಿಸಿದ್ದಾರೆ. ಸಮಾಜದ ಹಿರಿಯ ಮುಖಂಡ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ರಮೇಶ ಕತ್ತಿ ಅವರು ವಾಲ್ಮೀಕಿ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ದರ್ಪ ರಾಜ್ಯದಲ್ಲಿ ನಡೆಯುವುದಿಲ್ಲ. ಇದಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ. ಅವರನ್ನು ಬಂಧಿಸಬೇಕು ಎಂದು ಅಗ್ರಹಿಸಿದರು. ಸಮಾಜದ ಮುಖಂಡರಾದ ಎನ್.ಎಂ. ಆಂಜನೇಯ ಗುರೂಜಿ. ಕಾರ್ಯದರ್ಶಿ ಶ್ಯಾಗಲೆ ಕೆ.ಆರ್. ಮಂಜುನಾಥ್. ಶ್ರೀನಿವಾಸ್ ದಾಸಕರಿಯಪ್ಪ, ಯುವ ಘಟಕದ ಅಧ್ಯಕ್ಷ ಬಸವರಾಜ ತೋಟದ, ಶಾಮನೂರು ಪ್ರವೀಣ್, ಮಲ್ಲಾಪುರ ದೇವರಾಜ್, ಫಣಿಯಾಪುರ ಲಿಂಗರಾಜ್, ಕರೂರು ಹನುಮಂತು, ಗೋಶಾಲೆ ಸುರೇಶ. ಶಶಿ ಶ್ರೀಕಂಠಪುರ, ಮಂಜು ಗೊಲ್ಲರಹಳ್ಳಿ, ವರುಣ್ ಬೆಣ್ಣಿಹಳ್ಳಿ, ಪರುಶುರಾಮ ಕೆಟಿಜೆ ನಗರ, ಹದಡಿ ಪಾಲಾಕ್ಷಿ, ಸಂತೋಷ್ ಇದ್ದರು.