

ದಾವಣಗೆರೆ : ಆಸ್ತಿ ತೆರಿಗೆ ಪಾವತಿಸಲು ಬಂದಾಗ ನಗರಸಭೆ ಆವರಣದಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಸಾರ್ವಜನಿಕರಿಂದ ಪ್ರತಿ ಅರ್ಜಿಗೆ 30 ರಿಂದ 40 ರೂ.ಗಳನ್ನು ಪಡೆದು, ಯಾವುದೇ ರಸೀದಿ ನೀಡದಿರುವ ಹಿನ್ನೆಲೆಯಲ್ಲಿ ಹರಿಹರ ನಗರಸಭೆ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಸೇರಿ 7 ಜನರ ವಿರುದ್ಧ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯ ಡಿವೈಎಸ್ಪಿ ಕೆ. ಕಲಾವತಿ ಅವರು ಈ ಕುರಿತು ದೂರು ನೀಡಿದ್ದಾರೆ. ನಗರಸಭೆಯ ಕಚೇರಿ ವ್ಯವಸ್ಥಾಪಕಿ ನಿರಂಜನಿ, ಕಂದಾಯ ನಿರೀಕ್ಷಕಿ ಚಿತ್ರಾ, ಪ್ರಭಾರ ಕಂದಾಯ ನಿರೀಕ್ಷಕ ರಮೇಶ್, ಖಾಸಗಿ ವ್ಯಕ್ತಿಗಳಾದ ಮೌನೇಶ್, ಮಹಮ್ಮದ್ ಹಫೀಜ್ ವುಲ್ಲಾ ಮತ್ತು ಹನುಮಂತಪ್ಪ ತುಂಬಿಗೆರೆ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ತಾವು ಸೋಮವಾರ ಭೇಟಿ ನೀಡಿದ್ದಾಗ ಹರಿಹರ ನಗರಸಭೆ ಆವರಣದಲ್ಲಿ ಖಾಸಗಿ ವ್ಯಕ್ತಿಗಳಾದ ಮೌನೇಶ್, ಮಹಮ್ಮದ್ ಹಫೀಜ್ ವುಲ್ಲಾ ಅವರು ಶಾಮಿಯಾನ ಹಾಕಿಕೊಂಡು, ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳನ್ನು ಬಳಕೆ ಮಾಡಿ, ಸರ್ಕಾರಿ ನೌಕರರಂತೆ ನಟಿಸಿ, ಸಾರ್ವಜನಿಕರಿಂದ ಪ್ರತಿ ಅರ್ಜಿಗೆ 30 ರಿಂದ 40 ರೂ. ಪಡೆಯುವುದು, ಅದಕ್ಕೆ ರಸೀದಿ ನೀಡದಿರುವುದು ಕಂಡುಬಂದಿತು. ಅವರನ್ನು ವಿಚಾರಿಸಿದಾಗ, ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಹಾಗೂ ಕಚೇರಿ ವ್ಯವಸ್ಥಾಪಕಿ ನಿರಂಜನಿ ಅವರ ಆದೇಶದ ಮೇರೆಗೆ ಹಣ ಸಂಗ್ರಹ ಮಾಡುತ್ತಿರುವುದಾಗಿ ತಿಳಿಸಿದರು ಎಂದು ಡಿವೈಎಸ್ಪಿ ಕೆ. ಕಲಾವತಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮೌನೇಶ್ ಅವರ ಬ್ಯಾಂಕ್ ಖಾತೆಯಲ್ಲಿ 1.63 ಲಕ್ಷ ರೂ, ಹಾಗೂ ಮಹಮ್ಮದ್ ಹಫೀಜ್ ವುಲ್ಲಾ ಅವರ ಸಹೋದರನ ಬ್ಯಾಂಕ್ ಖಾತೆಗೆ 89,400 ರೂ. ಜಮಾ ಆಗಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ...