ಹೊಸ ನಾಯಕತ್ವ ಬೆಳೆಸುವ ಸಂಕಲ್ಪ

dvg-halumatha.jpg
Published on

ದಾವಣಗೆರೆ  : ರಾಜ್ಯದಲ್ಲಿ ನಮ್ಮದು ಉಪ ಪಂಗಡಗಳಿಲ್ಲದ ಅತಿ ದೊಡ್ಡ ಸಮುದಾಯ. ರಾಜಕೀಯ ಶಕ್ತಿ ಇದ್ದಾಗ ಮಾತ್ರ ಬೆಳೆಯಲು ಸಾಧ್ಯ. ಸಿಎಂ ಸಿದ್ದರಾಮಯ್ಯ ಅವರ ನಂತರ ಸಮಾಜಕ್ಕೆ ರಾಜಕೀಯ ದಿಕ್ಕು ತೋರಿಸುವ ನಾಯಕತ್ವವನ್ನು ಬೆಳೆಸಬೇಕಿದೆ. ಜಿಲ್ಲೆ ಹಾಗೂ ಪ್ರದೇಶವಾರು ನಾಯಕರನ್ನು ರೂಪಿಸಬೇಕಿದೆ.  ಹಾಲುಮತ ಮಹಾಸಭಾದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ, ಕುರುಬ ಸಮುದಾಯದ ರಾಜಕೀಯ ಭವಿಷ್ಯದ ‘ನೀವೂ ನಾಯಕರಾಗಿ’ ಎಂಬ ರಾಜ್ಯಮಟ್ಟದ ಸಭೆಯಲ್ಲಿ ಮಾಡಿದ ಸಂಕಲ್ಪವಿದು.  ಸಭೆಯಲ್ಲಿ ಮಾತನಾಡಿದ ಮುಖಂಡರೆಲ್ಲರ ಆಶಯವೂ ಒಂದೇ ಆಗಿತ್ತು. ಪಕ್ಷ ಯಾವುದೇ ಇರಲಿ, ಅವುಗಳ ವರಿಷ್ಠರನ್ನು ಭೇಟಿ ಮಾಡಿ, ನಮ್ಮ ಸಮುದಾಯದ ಯುವಕರಿಗೆ ರಾಜಕೀಯ ಅವಕಾಶ ಮಾಡಿಕೊಡುವಂತೆ ಮನವಿ ಮಾಡುವುದು, ಚುನಾವಣೆಗಳು ಸಮೀಪಿಸಿದಾಗ ಮತ್ತೊಮ್ಮೆ ಅವರನ್ನು ಕಂಡು ಟಿಕೆಟ್ ಕೊಡುವಂತೆ ಆಗ್ರಹಿಸುವ ಬಗ್ಗೆ ಸಲಹೆ ವ್ಯಕ್ತವಾಯಿತು.  ಮುಂಬರುವ ಗ್ರಾ.ಪಂ, ತಾ.ಪಂ, ಜಿ.ಪಂ. ಚುನಾವಣೆಗಳಿಗೆ ನಮ್ಮ ಸಮುದಾಯದ ಆಕಾಂಕ್ಷಿಗಳಿಗೆ ಒತ್ತಾಸೆಯಾಗಿ ನಿಂತು, ಅವರಿಗೆ ಅಗತ್ಯವಾದ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ ತರಬೇತಿಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು.  ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಮುಖಂಡರಾದ ಜಿ.ಬಿ. ವಿನಯ ಕುಮಾರ್, ಬಿ.ಎಂ. ಸತೀಶ, ಸುವರ್ಣಾ ನಾಗರಾಳ, ಉಮೇಶ ಮಳವಳ್ಳಿ, ಸಿ. ವೀರಣ್ಣ, ಪ್ರಸನ್ನ ಕುಮಾರ್, ಪ್ರೊ. ಯಲ್ಲಪ್ಪ ಹದಡಿ, ವಿನಾಯಕ ಕಟ್ಟಿಕರ್, ಓಮಣ್ಣ, ಅಣ್ಣಪ್ಪ ಇದ್ದರು. ಚಂದ್ರು ದೀಟೂರು ಸ್ವಾಗತಿಸಿದರು. ಎಸ್.ಎಂ. ಸಿದ್ದಲಿಂಗಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net