ಸ್ವಕುಳಸಾಳಿ ಸಮಾಜದ ಅಭಿವೃದ್ಧಿಗೆ ಪ್ರಯತ್ನ

dvg-svakulasali.jpg
Published on

ದಾವಣಗೆರೆ : ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಯತ್ನ ನಡೆಸಲಾಗುವುದು ಎಂದು ರಾಜ್ಯ ಸ್ವಕುಳಸಾಳಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ್ ಎನ್. ಭಂಡಾರೆ ಹೇಳಿದರು.
 ನಗರದ ಹೊಂಡದ ಸರ್ಕಲ್ ಬಳಿಯ ಶ್ರೀ ಜಿಹ್ವೇಶ್ವರ ಧ್ಯಾನ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ರಾಜ್ಯ ಸ್ವಕುಳಸಾಳಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ರಾಜ್ಯದಲ್ಲಿ ಸ್ವಕುಳಸಾಳಿ ಅತ್ಯಂತ ಚಿಕ್ಕ ಸಮಾಜವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಸಾಧಿಸಬೇಕಿದೆ. ಎಲ್ಲ ಜಿಲ್ಲೆಗಳಲ್ಲಿ ಸಮುದಾಯ ಭವನ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬೆನ್ನುಹತ್ತಿ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಸಮಾಜ ಬಾಂಧವರಿಂದ ಸುಮಾರು 3.31 ಲಕ್ಷ ರೂ. ದೇಣಿಗೆ ನೀಡಲಾಗಿದೆ. ವಿದೇಶದಿಂದಲೂ ಹಣಕಾಸು ನೆರವು ನೀಡಿದ್ದಾರೆ. ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂದರು.
 ಸಮಾಜದ ದಾವಣಗೆರೆ ಜಿಲ್ಲಾಧ್ಯಕ್ಷ ಡಾ.ಜಿ.ಪಿ. ಮೋಹನ್ ಮಾತನಾಡಿ, ಸಮಾಜವು ಶಿಕ್ಷಣದಿಂದ ಆರ್ಥಿಕ ಸಬಲತೆ ಸಾಧಿಸುತ್ತಿದೆ. ಪ್ರತಿ ಮನೆಯಲ್ಲೂ ಪದವೀಧರರು ಕಾಣಸಿಗುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
 ಸ್ವಕುಳಸಾಳಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ 8 ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲ. ಶಿಕ್ಷಣ ಸಂಸ್ಥೆಗೆ ಸಮಾಜದ ಹಾಸ್ಟೆಲ್‌ನಿಂದ 1 ಲಕ್ಷ ರೂ. ದೇಣಿಗೆ ನೀಡಲಾಗಿದ್ದು, ವಿದ್ಯಾವಂತರು ಸಂಸ್ಥೆಯ ಸದಸ್ಯತ್ವ ಪಡೆದು ಸಂಸ್ಥೆಯ ಬೆಳವಣಿಗೆಗೆ ಗಮನಹರಿಸಬೇಕು ಎಂದು ಹೇಳಿದರು.
 ಅಖಿಲ ಭಾರತ ಸ್ವಕುಳಸಾಳಿ ಸಮಾಜದ ಅಧ್ಯಕ್ಷ ರಮೇಶ್ ಚಿಲ್ಲಾಳ ಮಾತನಾಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಮಾಜದ ಜನರು ಶಿಕ್ಷಣದ ಬಗ್ಗೆ ಹೊಂದಿರುವ ಕಾಳಜಿ ತೋರಿಸುತ್ತದೆ. ವಿದ್ಯಾರ್ಥಿಗಳ ಸಾಧನೆ ನಿರಂತರ ಮುಂದುವರಿಯಲಿ ಎಂದರು.
 ಪಾಲಿಕೆ ಮಹಾಪೌರ ವಿನಾಯಕ ಪೈಲ್ವಾನ್ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಕೈಗೊಳ್ಳಲಿ ಎಂದು ಆಶಿಸಿದರು.
 ಉಪಾಧ್ಯಕ್ಷೆ ಲಲಿತಾ ಮಾಂಜ್ರೆ, ಗುರುಪೀಠ ಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮರಾಜ ಏಕಬೋಟೆ, ಸಮಾಜದ ಮುಖಂಡರಾದ ಹನುಮಂತಪ್ಪ ಕ್ಷೀರಸಾಗರ, ಜಿ.ಪಿ. ರಾಜಶೇಖರ್ ಇದ್ದರು.
 ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net