

ದಾವಣಗೆರೆ : ಉದ್ಯಮ ಆರಂಭಿಸುವುದು ಸೇರಿ ವಿವಿಧ ವಲಯಗಳಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ಯುವ ಪದವೀಧರರು ಬದುಕು ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ್ ಹೇಳಿದರು.
ನಗರದ ಬಂಟರ ಭವನದಲ್ಲಿ ಸೋಮವಾರ, ಆರ್.ಜಿ. ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ 2020ರ ತಂಡದ ಪದವಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉನ್ನತ ಶಿಕ್ಷಣ, ಪಿಎಚ್.ಡಿ, ಸ್ವಯಂ ಉದ್ಯೋಗ ಸೇರಿ ಹಲವಾರು ವಲಯಗಳಲ್ಲಿ ಯುವಜನರು ಭವಿಷ್ಯವನ್ನು ಕಂಡುಕೊಳ್ಳಬಹುದು. ರಾಜಕೀಯ ಕ್ಷೇತ್ರದ ಬಗ್ಗೆಯೂ ಅರಿವು ಹೊಂದಬೇಕು ಎಂದು ತಿಳಿಸಿದರು.
ಪಾಲಕರು, ಸಮಾಜ ಹಾಗೂ ತಾವು ಅಧ್ಯಯನ ಮಾಡಿದ ಕಾಲೇಜಿಗೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದೊಡ್ಡ ಕನಸುಗಳನ್ನು ಕಾಣುವ ಮೂಲಕ ದೊಡ್ಡ ಸಾಧನೆಯ ಗುರಿ ಹೊಂದಬೇಕು. ಸಣ್ಣ ಗುರಿಗಳಿಂದ ಸಾಧನೆ ಮಾಡಲು ಸಾಧ್ಯವಾಗದು ಎಂದೂ ಹೇಳಿದರು.
ಆರ್.ಜಿ. ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪಿ.ಎಸ್. ಶಿವಪ್ರಕಾಶ್ ಮಾತನಾಡಿ, ಕಾಲೇಜು ಈ ಬಾರಿ 9 ರ‌್ಯಾಂಕ್ ಗಳಿಸಿದೆ. ಕಾಲೇಜಿನ ಮೂವರು ಸಿ.ಎ. ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಅಧ್ಯಾಪಕ ವಿನಾಯಕ ಕೆ. ಭಂಡಾರಿ, ಬೂಸನೂರು ಶಾಲೆಯ ಸ್ಥಾಪಕ ಶಿವಯೋಗಿ, ಶಾಲೆಯ ಪ್ರಾಚಾರ್ಯೆ ಅರ್ಚನಾ ಇದ್ದರು.
ಕಾಲೇಜಿನ ಅಧ್ಯಕ್ಷೆ ಶ್ವೇತಾ ಆರ್. ಗಾಂಧಿ, ಪದವೀಧರರಿಗೆ ಪ್ರಮಾಣವಚನ ಬೋಧಿಸಿದರು. ಪ್ರಾಚಾರ್ಯೆ ಜಿ.ಕೆ. ಗೀತಾ ವಾರ್ಷಿಕ ವರದಿ ಓದಿದರು. ಕೆ. ಈಶ್ವರ ಪ್ರಸಾದ್ ಸ್ವಾಗತಿಸಿದರು. ಎಲ್.ಎಂ. ಶರಣ ಕುಮಾರ್ ಹಾಗೂ ಆರ್. ಪವಿತ್ರಾ ನಿರೂಪಿಸಿದರು. ಎಚ್. ಪ್ರವೀಣ್ ಕುಮಾರ್ ವಂದಿಸಿದರು.