ಭ್ರಷ್ಟಾಚಾರ ಕಡಿವಾಣಕ್ಕೆ ಸಹಕರಿಸಿ

DVG-GFGC-10.jpg
Published on

ದಾವಣಗೆರೆ : ಯುವ ಸಮುದಾಯವು ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತ ಜತೆಗೆ ಕೈಜೋಡಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಎಂ.ಎಸ್.ಕೌಲಾಪುರೆ ತಿಳಿಸಿದರು.
 ಕರ್ನಾಟಕ ಲೋಕಾಯುಕ್ತ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
 ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಯುವಜನರು ಲಂಚಗುಳಿತನ ವಿರುದ್ಧ ಜಾಗೃತವಾಗಬೇಕು. ಎಲ್ಲಿಯೇ ಆಗಲಿ ಲಂಚಾವತಾರದ ಕುರುಹುು ಕಂಡರೆ ಲೋಕಾಯುಕ್ತಕ್ಕೆ ದೂರು ನೀಡಿ ಭ್ರಷ್ಟರನ್ನು ಶಿಕ್ಷಿಸಲು ಸಹಕರಿಸಬೇಕು ಎಂದರು.
 ಪ್ರಜಾಪ್ರಭುತ್ವದಲ್ಲಿ ಆಡಳಿತವು ಯಾವುದೇ ಲಂಚ ಮತ್ತು ಆಮಿಷಗಳಿಲ್ಲದೆ ಪಾರದರ್ಶಕವಾಗಿ ನಡೆಯಬೇಕು. ಸಾಮಾನ್ಯ ಜನರಿಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳು ಅಲೆದಾಟಗಳಿಲ್ಲದಂತೆ ಆಗುತ್ತವೆ ಎಂಬ ಭರವಸೆ ಹುಟ್ಟಬೇಕು ಎಂದು ಹೇಳಿದರು.
 ಲೋಕಾಯುಕ್ತ ಸಬ್ ಇನ್‌ಸ್ಪೆಕ್ಟರ್ ಪ್ರಭು ಅವರು ಲೋಕಾಯುಕ್ತದ ಇತಿಹಾಸ, ರಚನೆಯ ಉದ್ದೇಶ ಮತ್ತು ವಿವಿಧ ಕಾಯ್ದೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
 ಕಾಲೇಜಿನ ಪ್ರಾಚಾರ್ಯ ದಾದಾಪೀರ್ ನವಿಲೇಹಾಳ್ ಮಾತನಾಡಿ ಭ್ರಷ್ಟಾಚಾರ ತೊಡೆದುಹಾಕಿ ಆರೋಗ್ಯವಂತ ಸಮಾಜ ನಿರ್ಮಿಸುವ ಲೋಕಾಯುಕ್ತ ಪ್ರಯತ್ನದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದರು.
 ಮ್ಯಾನೇಜರ್ ಗೀತಾದೇವಿ, ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಹಾಗೂ ಕಾಲೇಜಿನ ಅಧ್ಯಾಪಕರು ಭಾಗವಹಿಸಿದ್ದರು.
 ಅಧ್ಯಾಪಕ ಮಂಜುನಾಥ್ ಸ್ವಾಗತಿಸಿದರು. ರಾಜಮೋಹನ್ ವಂದಿಸಿದರು. ಶಿವಕುಮಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net