ವಿದ್ಯಾರ್ಥಿಗಳಿಗೆ ವೈಚಾರಿಕತೆ ಅಗತ್ಯ

dvg-sbc-college.jpg
Published on

ದಾವಣಗೆರೆ : ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಜತೆಗೆ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಹೇಳಿದರು.  ಶ್ರೀ ವಿನಾಯಕ ಎಜುಕೇಶನ್ ಟ್ರಸ್ಟ್, ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ, 2025-26ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ಘಟಕ, ರೆಡ್‌ಕ್ರಾಸ್ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.  ಶಿಕ್ಷಣವೆಂದರೆ ಕೇವಲ ಅಕ್ಷರಜ್ಞಾನವಲ್ಲ, ಅದು ನಮ್ಮೊಳಗಿನ ಮೃದು ಭಾವನೆಯನ್ನು, ಮನುಷ್ಯತ್ವವನ್ನು ಜಾಗೃತಗೊಳಿಸಬೇಕು. ತರ್ಕಕ್ಕೆ ಒಳಪಡಿಸಬೇಕು. ವಚನಕಾರರು ಕೂಡಾ ವೈಚಾರಿಕತೆಗೇ ಹೆಚ್ಚು ಒತ್ತು ಕೊಟ್ಟರು ಎಂದು ತಿಳಿಸಿದರು.  ಸಮಾಜದಲ್ಲಿ ನಂಬಿಕೆ, ಮತ, ಸುಳ್ಳಿನ ಆಧಾರದಲ್ಲಿ ಒಡೆದು ಆಳುವ ವಿಷ ವರ್ತುಲವಿದೆ. ವೈಚಾರಿಕೆಯನ್ನು ಅಳವಡಿಸಿಕೊಂಡಾಗ ಅದರಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.  ‘ಶಿಕ್ಷಣವೆಂದರೆ ನಮ್ಮೊಳಗಿನ ಶಕ್ತಿಯನ್ನು ಹೊರತರುವ ಮಾರ್ಗವಾಗಿದೆ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ನೆನಪಿಸಿದರು. ನಾವೀಗ ವಿದ್ಯೆಯನ್ನು ಪಡೆದು ಅಕ್ಷರಸ್ಥರಾಗುತ್ತಿದ್ದೇವೆ ಹೊರತು ಶಿಕ್ಷಿತರಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಅಕ್ಕ ಮಹಾದೇವಿ ಕನ್ನಡದ ಮೊದಲ ಬಂಡಾಯಗಾರ್ತಿ. ತಾನು ನಂಬಿದ ತತ್ವಕ್ಕೆ ಅವರು ಬದ್ಧರಾಗಿದ್ದರು ಎಂದು ಹೇಳಿದರು.  ಸಾಮಾಜಿಕ ಮಾಧ್ಯಮಗಳು ನಮ್ಮ ಶೇ. 50 ರಷ್ಟು ಸಮಯವನ್ನು ನುಂಗಿ ಹಾಕುತ್ತಿದೆ. ನಮ್ಮ ಸುಸಮಯವನ್ನು ಕಸಿಯುತ್ತಿದೆ. ತೆರೆ ಮರೆಯಿಂದ ಅಭಿಪ್ರಾಯವನ್ನು ರೂಪಿಸುವ ಕೆಲಸ ಅವುಗಳಿಂದ ಆಗುತ್ತಿದೆ. ಹೀಗಿರುವಾಗ ತಪ್ಪು ಹೆಜ್ಜೆ ಇಡಬಾರದು. ವಿದ್ಯಾರ್ಥಿಗಳು ನಿಮ್ಮ ಜವಾಬ್ದಾರಿ ಅರಿಯಬೇಕು ಎಂದು ಸಲಹೆ ನೀಡಿದರು.  ಈ ಹಿಂದೆ ಪ್ಲೇಗ್, ಕಾಲರಾದಂಥ ರೋಗಗಳು ಆತಂಕ ಮೂಡಿಸುತ್ತಿದ್ದವು. ಈಗ ಸಾಮಾಜಿಕ ಮಾಧ್ಯಮಗಳೆಂಬ ರೋಗವು ಜನಾಂಗವನ್ನೇ ನಾಶ ಮಾಡುತ್ತಿದೆ ಎಂದು ತಿಳಿಸಿದರು.  ತಲಸ್ಪರ್ಶಿಯಾಗಿ ಓದಬೇಕು. ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು. ಒಳ್ಳೆಯ ಸಂಗೀತ ಕೇಳಬೇಕು, ಒಳ್ಳೆಯ ಪುಸ್ತಕ ಓದಬೇಕು. ಸಮಾನತೆಯ ಕಡೆಗೆ ಹೆಜ್ಜೆ ಹಾಕಬೇಕು. ತಾಯಂದಿರಲ್ಲಿ ದೊಡ್ಡ ಶಕ್ತಿಯಿದೆ ಎಂದು ಹೇಳಿದರು.  ತಂದೆ-ತಾಯಿ ಋಣ, ಗುರುವಿನ ಋಣ ಹಾಗೂ ಸಮಾಜದ ಋಣವನ್ನು ತೀರಿಸಬೇಕು. ಸಮಾಜದಿಂದ ಪಡೆದುಕೊಂಡಿದ್ದನ್ನು ವಾಪಸ್ ನೀಡಬೇಕು. ಎಲ್ಲರೂ ಸೌಹಾರ್ದದಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.  ಎಸ್‌ಬಿಸಿ ಕಾಲೇಜಿನ ಅಧ್ಯಕ್ಷ ಬಿ.ಸಿ. ಉಮಾಪತಿ, ವಿನಾಯಕ ಎಜುಕೇಶನ್ ಟ್ರಸ್ಟ್ ಸದಸ್ಯರಾದ ಕೆ.ಜೆ. ಸುಗಂಧರಾಜ್, ಅಥಣಿ ಪ್ರಶಾಂತ್, ಕಾರ್ಯದರ್ಶಿ ಎನ್.ಎ. ಮುರುಗೇಶ್, ಪ್ರಾಚಾರ್ಯರಾದ ಎಂ.ಸಿ. ಗುರು, ಡಯಾನಾ ಇದ್ದರು. ಭೂಮಿಕಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಗೌರಿ ಚಿನ್ಮಯಿ ಸ್ವಾಗತಿಸಿದರು. ಮಾಧವಿ ವಂದಿಸಿದರು. ಭೂಮಿಕಾ ಭಾಗವತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net