ಶಿಕ್ಷಣದ ಜತೆಗೆ ಸಾಂಸ್ಕೃತಿಕ ಚಟುವಟಿಕೆ ಅವಶ್ಯಕ

bs.jpg
Published on

ದಾವಣಗೆರೆ : ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಅವಶ್ಯಕ. ಇವು ಜೀವನದಲ್ಲಿ ಸ್ವತಂತ್ರವಾಗಿ ಬದುಕಲು ಪ್ರೇರೇಪಿಸುತ್ತವೆ ಎಂದು ಹುಬ್ಬಳಿಯ ಉದ್ಯಮಿ ಎಂ.ಕೆ. ವೀರೇಂದ್ರ ಹೇಳಿದರು.  ನಗರದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್ ಹಾಗೂ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಗುರುಗಳ ಮಾರ್ಗದರ್ಶನ ಅವಶ್ಯಕ. ಇದರಿಂದ ನಾನು ಉದ್ಯಮಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿದ್ಯಾರ್ಥಿ ಜೀವನದ ಘಟನೆ ಮೆಲುಕು ಹಾಕಿದರು.  ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪದವಿ ಎಂಬುದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಒಂದು ಹಂತ ಮಾತ್ರ. ಆದರೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.  ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕಲಿಕೆ ವೇಗವಾಗಿ ಇರಬೇಕು, ಪದವಿ ಜತೆಗೆ ಬೇರೆ ಕೋರ್ಸ್‌ಗಳನ್ನೂ ಆಸಕ್ತಿಯಿಂದ ಕಲಿಯಬೇಕು. ಎಲ್ಲ ಹಂತದಲ್ಲೂ ಜ್ಞಾನ ಸಂಪಾದಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.  ವಿನಾಯಕ ಎಜುಕೇಷನ್ ಟ್ರಸ್ಟ್ ಸದಸ್ಯರಾದ ವೆಂಕಟರೆಡ್ಡಿ, ಡಾ.ಎಚ್.ಬಿ. ಮೋಹನ್, ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಡಾ.ಕೆ. ಷಣ್ಮುಖ ಹಾಗೂ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಡಯಾನ ದಿವ್ಯಾ ಇದ್ದರು.  ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ವಿವಿಧ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಸಿ. ಗುರು ಪ್ರಾಸ್ತಾವಿಕ ಮಾತನಾಡಿದರು. ಶಾಜಿಯಾ ನಿರೂಪಿಸಿದರು, ಸಹನ ಸ್ವಾಗತಿಸಿದರು, ಸಿರಿ ಗೌರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net