

ದಾವಣಗೆರೆ : ಘನ ತ್ಯಾಜ್ಯ ನಿರ್ವಹಣೆಯ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ನಗರದ ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ, ‘ಘನ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆ’ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದರು.
ಘನ ತ್ಯಾಜ್ಯಗಳು ಪರಿಸರಕ್ಕೆ ಅತಿ ದೊಡ್ಡ ಸವಾಲಾಗಿದ್ದು ಇದನ್ನು ಸೂಕ್ತ ರೀತಿಯಾಗಿ ನಿರ್ವಹಣೆ ಮಾಡಿದರೆ ಮಾತ್ರ ಪರಿಸರ ಉಳಿಯುತ್ತದೆ. ಇಲ್ಲವಾದರೆ ನಮ್ಮ ಭವಿಷ್ಯದಲ್ಲಿ ಜೀವ ಸಂಕುಲದ ರಕ್ಷಣೆಗೆ ಸಮಸ್ಯೆಯಾಗಲಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಡಾ. ಎಚ್. ಲಕ್ಷ್ಮೀಕಾಂತ್ ಮಾತನಾಡಿ, ಜೀವ ಸಂಕುಲಕ್ಕೆ ಮಣ್ಣು, ನೀರು ಮತ್ತು ಮರದ ಅವಶ್ಯಕತೆ ಮತ್ತು ಅವುಗಳು ನಿರ್ವಹಿಸುತ್ತಿರುವ ಕಾರ್ಯಗಳ ಬಗ್ಗೆ ತಿಳಿಸಿದರು. ಪ್ಲಾಸ್ಟಿಕ್‌ನ ಮಿತ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ವಿದ್ಯುನ್ಮಾನ ಉಪಕರಣಗಳ ತಯಾರಿಕೆ, ಬಳಕೆ ಮತ್ತು ನಿರ್ವಹಣೆ ಕುರಿತು ಸಂಪೂರ್ಣ ವಿವರವನ್ನು ನೀಡಿದ ಅವರು ತಂತ್ರಜ್ಞಾನ ಮಾನವನ ಜೀವನಕ್ಕೆ ಅವಶ್ಯವಿರುವಷ್ಟು ಮಾತ್ರ ಬಳಸಿಕೊಂಡರೆ ಸೂಕ್ತ ಎಂದು ತಿಳಿಸಿದರು. ಆರೋಗ್ಯಕರ ಜೀವನಕ್ಕಾಗಿ ಆಹಾರ ಪದ್ಧತಿ, ಜೀವನ ಶೈಲಿ ಮತ್ತು ಪರಿಸರದ ಸಂರಕ್ಷಣೆ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜಿಲ್ಲಾ ಘನ ತ್ಯಾಜ್ಯ ನಿರ್ವಹಣೆಯ ಯೋಜನಾಧಿಕಾರಿ ಮಹಾಂತೇಶ ಮಾತನಾಡಿ ನಗರದಲ್ಲಿ ಪ್ರತಿ ದಿನ 170 ಟನ್‌ಗಿಂತ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಈ ಬಗ್ಗೆ ಪಾಲಿಕೆಯವರು ಮತ್ತು ಸರ್ಕಾರದವರು ನೀಡುವ ಸಲಹೆ, ಸೂಚನೆಗಳನ್ನು ಸಾರ್ವಜನಿಕರು ಪಾಲಿಸಿದರೆ ಮಾತ್ರ ತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯುತ್ತದೆ. ಇಲ್ಲವಾದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಜೈನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ. ಗಣೇಶ್ ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹಲವು ಕಾರಣಗಳಿಗಾಗಿ ಇತರೆ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಬೇಕಾಗಿದ್ದು ಆ ಸಮಯದಲ್ಲೂ ಕೂಡ ಪರಿಸರ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಪಾಟೀಲ್, ಸಂಯೋಜಕ ಎನ್. ಗುರುಪ್ರಶಾಂತ್, ಬೋಧಕ, ಬೋಧಕೇತರ ಸಿಬ್ಬಂದಿ, ವಿದಾರ್ಥಿಗಳು ಇದ್ದರು.