

ದಾವಣಗೆರೆ : ಸಿವಿಲ್ ಇಂಜಿನಿಯರಿಂಗ್ ಪದವೀಧರರಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳಿವೆ ಎಂದು ಅಲ್ಟ್ರಾಟೆಕ್ ಸಿಮೆಂಟ್‌ನ ಪ್ರಾದೇಶಿಕ ವ್ಯವಸ್ಥಾಪಕ (ತಾಂತ್ರಿಕ) ಗಣಪತಿ ಆರ್. ಮುಂಬಾರೆ ಹೇಳಿದರು.
ನಗರದ ಜೈನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಂಗಳವಾರ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಸಕ್ತ ಶೈಕ್ಷಣಿಕ ವರ್ಷದ ವೇದಿಕೆ ಉದ್ಘಾಟನೆ ಮತ್ತು ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಜಿನಿಯರಿಂಗ್‌ನ ವಿವಿಧ ಶಾಖೆಗಳಿಗೆ ಸಿವಿಲ್ ವಿಭಾಗವು ತಾಯಿ ಇದ್ದಂತೆ. ಆಡಳಿತ, ಕನ್ಸಲ್ಟನ್ಸಿ ಇನ್ನಿತರ ಕ್ಷೇತ್ರಗಳಲ್ಲಿ ಉದ್ಯೋಗವಕಾಶಗಳು ದೊರೆಯಲಿವೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಗಳನ್ನು ಕಲಿಯುವುದರ ಜತೆಗೆ ಅವುಗಳ ಪ್ರಾಯೋಗಿಕ ಜ್ಞಾನವನ್ನೂ ಪಡೆಯಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆಯ ಕೆ.ಎಂ. ಚೈತ್ರಾ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿಸಿದರು. ಸಿವಿಲ್ ಇಂಜಿನಿಯರಿಂಗ್‌ನ ಅವಕಾಶಗಳ ಬಗ್ಗೆ ಸಲಹೆಗಾರ ಡಾ. ಮಂಜಪ್ಪ ಸಾರಥಿ ಮತ್ತು ಪ್ರಾಚಾರ್ಯ ಡಾ. ಡಿ.ಬಿ. ಗಣೇಶ್ ವಿವರಿಸಿದರು.
ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಪಾಟೀಲ್, ಜಿ. ಬಸವಚೇತನ, ಕೆ.ಆರ್. ದರ್ಶನ್, ವಿಭಾಗದ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.