ಕೀಳರಿಮೆ ತೊರೆದು ಸ್ಪರ್ಧೆ ಎದುರಿಸಲು ಸಜ್ಜಾಗಿ

dvg-C.V.-Raman-college-11.jpg
Published on

ದಾವಣಗೆರೆ : ವಿದ್ಯಾರ್ಥಿಗಳು ಕೀಳರಿಮೆ ತೊರೆದು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ ಸಲಹೆ ನೀಡಿದರು.
 ನಗರದ ಡಾ. ಸಿ.ವಿ. ರಾಮನ್ ಕಾಲೇಜ್ ಆಫ್ ಅಡ್ಮಿನಿಸ್ಟ್ರೇಷನ್ ಆ್ಯಂಡ್ ನೆಟ್‌ವರ್ಕ್ ಸೈನ್ಸಸ್ ಹಾಗೂ ಜಿ.ವಿ. ಪಿಯು ಕಾಲೇಜು ವತಿಯಿಂದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ, ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ, ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಪತ್ರಿಕೆಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಜಗತ್ತಿನಲ್ಲಿ ಏನೆಲ್ಲ ವಿದ್ಯಮಾನಗಳು ನಡೆಯುತ್ತಿವೆ ಎನ್ನುವುದರ ಅರಿವಿರಬೇಕು. ಈ ತಿಳಿವಳಿಕೆ ಭವಿಷ್ಯದಲ್ಲಿ ನೆರವಿಗೆ ಬರುತ್ತದೆ ಎಂದು ಹೇಳಿದರು.
 ಇಂಜಿನಿಯರಿಂಗ್, ವೈದ್ಯಕೀಯ ಪದವೀಧರರು ಐಎಎಸ್, ಐಪಿಎಸ್‌ನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೆಚ್ಚಾಗಿ ಬರೆಯುತ್ತಿದ್ದಾರೆ. ಕಲೆ, ವಾಣಿಜ್ಯ, ವಿಜ್ಞಾನ ಇನ್ನಿತರ ವಿಷಯಗಳ ಪದವಿಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ತಿಳಿಸಿದರು.
 ನಮ್ಮಲ್ಲಿ ಕೃತಜ್ಞತಾ ಮನೋಭಾವ ಇರಬೇಕು. ತಾಳ್ಮೆಯ ಗುಣವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಅನ್ಯಾಯವನ್ನು ಕಂಡಾಗ ಪ್ರತಿಭಟಿಸುವ ಪ್ರವೃತ್ತಿ ಇರಬೇಕು ಎಂದು ಕಿವಿಮಾತು ಹೇಳಿದರು.
 ಶಿಕ್ಷಣ ಕ್ಷೇತ್ರದಲ್ಲಿ ಅನಾರೋಗ್ಯಕರ ಪೈಪೋಟಿಯಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳಿದ್ದು ಅವುಗಳನ್ನು ಪಡೆಯುವ ಮೂಲಕ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನದ ಶಿಕ್ಷಣದ ಜತೆಗೆ ಅನುಭವದ, ಜೀವನ ಪಾಠ ಸಿಗಬೇಕು. ವಿವೇಕದ ಹೆಜ್ಜೆಗಳನ್ನಿಡಬೇಕು. ಯುವಜನರು ದೇಶದ ಉಸಿರು ಎಂದರು.
 ಜ್ಞಾನವೇ ಶಕ್ತಿ. ಆತ್ಮವಿಶ್ವಾಸದೊಂದಿಗೆ ಸಾಗಿದಾಗ ಗುರಿ ಮುಟ್ಟುವುದು ಸುಲಭವಾಗುತ್ತದೆ. ಕಲಿಕೆಯಲ್ಲಿ ಸ್ವಂತಿಕೆಯಿರಲಿ, ಮನಸ್ಸು ಪ್ರಬಲವಾಗಿರಲಿ ಎಂದು ತಿಳಿಸಿದರು.
 ಸಂಸ್ಥೆಯ ಕಾರ್ಯದರ್ಶಿ ವಿ. ಅಶ್ವಿನಿ ಮಾತನಾಡಿ, ವಿದ್ಯಾರ್ಥಿಗಳು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅಪಘಾತಗಳನ್ನು ಕಂಡಾಗ ನೋವಿನಲ್ಲಿ ಇರುವವರಿಗೆ ನೆರವಾಗಬೇಕು. ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಂಡು ಪಾಲಕರಿಗೆ, ಕಾಲೇಜಿಗೆ ಹೆಸರು ತರಬೇಕು. ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡು ಆಸಕ್ತಿಯ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.
 ಕಾಲೇಜಿನ ಪ್ರಾಚಾರ್ಯ ಡಾ. ಎನ್.ಸಿ. ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ವಿ. ಸಿದ್ದೇಶ್ ಇದ್ದರು. ಉಪನ್ಯಾಸಕ ಸಂತೋಷ್ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net