

ದಾವಣಗೆರೆ : ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ, ದಾವಣಗೆರೆ ವಿಶ್ವ ವಿದ್ಯಾಲಯ ಹಾಗೂ ಬೆಂಗಳೂರಿನ ಐಎಎಸ್ ಬಾಬಾ ಸಂಸ್ಥೆಯ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ‘ಸಂಕಲ್ಪ’ ಕೇಂದ್ರವನ್ನು ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಕಾಲೇಜು ಆವರಣದಲ್ಲಿ ಪ್ರಾರಂಭಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ವ್ಯಾಪ್ತಿಯ ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದರು. ಈ ಕೇಂದ್ರಕ್ಕಾಗಿ ದೃಶ್ಯಕಲಾ ಮಹಾವಿದ್ಯಾಲಯ ಆವರಣದ ಆರ್ಟ್ ಗ್ಯಾಲರಿ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವ ಸುಸಜ್ಜಿತ ಗ್ರಂಥಾಲಯ ಮತ್ತು ಅಗತ್ಯ ಮೂಲ ಸೌಕರ್ಯ ಒದಗಿಸಲಾಗಿದೆ. ಬೆಂಗಳೂರಿನ ಐ.ಎ.ಎಸ್ ಬಾಬಾ ತರಬೇತಿ ಸಂಸ್ಥೆಯು ಜಿಲ್ಲೆಯ ಆಕಾಂಕ್ಷಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡಲು ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.