

ದಾವಣಗೆರೆ : ಜಿಲ್ಲೆಯಲ್ಲಿ ಸಿಎನ್‌ಜಿ ಸಮಸ್ಯೆ ನಿವಾರಣೆಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕೈಗೊಂಡ ಪ್ರಯತ್ನ ಫಲ ನೀಡತೊಗಿದೆ. ಸಿಎನ್‌ಜಿ ಪೂರೈಕೆಯಲ್ಲಿ ಸಮಸ್ಯೆ ಉಂಟಾದ ಕಾರಣ ಆಟೋ ಹಾಗೂ ಕಾರು ಚಾಲಕರು ಎರಡು ತಿಂಗಳ ಹಿಂದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ನಗರದಲ್ಲಿ ಸಿಎನ್‌ಜಿ ಪಂಪ್‌ಗಳನ್ನು ಹೆಚ್ಚಿಸಬೇಕು, ಇಲ್ಲವೇ ಸಮರ್ಪಕ ಪೂರೈಕೆ ಮಾಡಬೇಕೆಂದು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಎಸ್. ಪುರಿ ಅವರಿಗೆ ಸಂಸದೆ ಪತ್ರ ಬರೆದು ಇಲ್ಲಿನ ಸಮಸ್ಯೆಯ ಕುರಿತು ಮಾಹಿತಿ ನೀಡಿದ್ದರು. ಹಂತ ಹಂತವಾಗಿ ಪರಿಶೀಲನೆ ಹಾಗೂ ಪತ್ರ ಬರೆದ ಪರಿಣಾಮವಾಗಿ ಇದೀಗ ಜಿಲ್ಲೆಯಲ್ಲಿ 10 ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಇತ್ತೀಚೆಗೆ ಹೊನ್ನಾಳಿಯಲ್ಲಿ 10ನೇ ಸಿಎನ್‌ಜಿ ಆರ್‌ಒ ಆರಂಭಿಸಲಾಗಿದೆ. ಮುಂದಿನ 6 ತಿಂಗಳಲ್ಲಿ ಇನ್ನೂ 3 ಮಳಿಗೆಗಳನ್ನು ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ದಾವಣಗೆರೆಯಲ್ಲಿ ಸಿಎನ್‌ಜಿ ಪೂರೈಕೆಯನ್ನು ಮತ್ತಷ್ಟು ಬಲಪಡಿಸುವ 6 ವಿಶೇಷ ಸಿಎನ್‌ಜಿ ಆರ್‌ಒಗಳನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ. ಸತತ ಪ್ರಯತ್ನ ಹಾಗೂ ಪರಿಶ್ರಮದ ಬಳಿಕ ಇದೀಗ ಸಮಸ್ಯೆ ನಿವಾರಣೆಯಾಗತೊಡಗಿದೆ. ಈ ಬಗ್ಗೆ ಆಟೋ ಹಾಗೂ ಕಾರು ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಸೀಮಿತ ಸಂಖ್ಯೆಯ ನಿಲ್ದಾಣಗಳು ಮತ್ತು ಆಟೋ ರಿಕ್ಷಾ, ಕಾರು, ಸಾರಿಗೆ ವಾಹನ, ಬೈಕ್, ಬಸ್ ಮತ್ತು ಟ್ರಕ್‌ಗಳಂತಹ ಸಿಎನ್‌ಜಿ ಚಾಲಿತ ವಾಹನಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ, ಸಿಎನ್‌ಜಿ ಪೂರೈಕೆಯ ತೀವ್ರ ಕೊರತೆಯಿಂದ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಿಂದಾಗಿ ಪರಿಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿತ್ತು.