

ದಾವಣಗೆರೆ : ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ವಿಜಯ ಯಾತ್ರೆ ಅಂಗವಾಗಿ ನಾಯಕ ನಟ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್ ಹಾಗೂ ನಿರ್ದೇಶಕ ಹೇಮಂತ ರಾವ್ ಸೋಮವಾರ ಭೇಟಿ ನೀಡಲಿದ್ದಾರೆ.
ಅಂದು ದಾವಣಗೆರೆ ಮೂವೀ ಟೈಮ್ಗೆ 10 ಗಂಟೆ, ಗೀತಾಂಜಲಿ ಚಿತ್ರಂಮದಿರಕ್ಕೆ 11 ಗಂಟೆ ಶೋನಲ್ಲಿ ಪ್ರೇಕ್ಷಕರೊಂದಿಗೆ ಸಂತಸ ಹಂಚಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಕ್ಲಾಸ್ ಲವ್ ಸ್ಟೋರಿಯನ್ನು ಹೊತ್ತು ತಂದಿದ್ದು, ಪ್ರೇಕ್ಷಕರ ಮನಸನ್ನು ಗೆದ್ದಿದೆ. ಈಗಾಗಲೇ ಮಂಡ್ಯ, ಮೈಸೂರು, ಹಾಸನ, ಉಡುಪಿ, ಮಣಿಪಾಲ್ ಕುಂದಾಪುರ, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ವಿಜಯ ಯಾತ್ರೆ ಯಶಸ್ವಿಯಾಗಿ ನಡೆದಿದೆ.
ಪ್ರತಿ ಸಿನಿಮಾ ರಿಲೀಸ್ ಆದಾಗಲೂ ನೇರವಾಗಿ ಪ್ರೇಕ್ಷಕರ ಹತ್ತಿರ ಬಂದು ತಮ್ಮ ಸಿನಿಮಾ ಬಗ್ಗೆ ಸಂವಾದ ನಡೆಸುವ ರಕ್ಷಿತ್ ಶೆಟ್ಟಿ, ‘ಅವನೇ ಶ್ರೀಮನ್ನಾರಾಯಣ’, ‘777 ಚಾರ್ಲಿ’ ಪ್ರದರ್ಶನದ ಸಂದರ್ಭದಲ್ಲೂ ಜನರೊಂದಿಗೆ ಸಂವಾದ ನಡೆಸಿದ್ದರು.
ಈ ಚಿತ್ರದ ತಾರಾಗಣದಲ್ಲಿ ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಇದ್ದಾರೆ.