

ದಾವಣಗೆರೆ : ಜಿಲ್ಲೆಯಲ್ಲಿ ಬುಧವಾರ ಕ್ರಿಸ್‌ಮಸ್ ಹಬ್ಬವನ್ನು ಕ್ರಿಶ್ಚಿಯನ್ನರು ಸಂಭ್ರಮದಿಂದ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳಿಗೆ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಸಾರ್ವಜನಿಕರು ಚರ್ಚ್‌ಗಳಿಗೆ ಭೇಟಿ ನೀಡಿ ಹಬ್ಬದ ಖುಷಿಯನ್ನು ಹಂಚಿಕೊಂಡರು. ಕ್ಯಾಂಡಲ್ ಹಚ್ಚುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ನಗರದ ಪಿ.ಜೆ. ಬಡಾವಣೆಯ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ ಜೋರಾಗಿತ್ತು. ವಿದ್ಯುದ್ದೀಪಗಳ ಅಲಂಕಾರದಿಂದ ಚರ್ಚ್ ಜಗಮಗಿಸುತ್ತಿತ್ತು. ಹಬ್ಬದ ಅಂಗವಾಗಿ ಮಂಗಳವಾರ ರಾತ್ರಿ 11 ರಿಂದ 1 ಗಂಟೆಯ ವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಕೇಕ್ ಕತ್ತರಿಸಿ ಹಂಚಲಾಯಿತು. ಬುಧವಾರ ಬೆಳಗ್ಗೆ ಮತ್ತೆ ಪ್ರಾರ್ಥನೆ ನೆರವೇರಿತು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಕಂಡುಬಂದಿತು. ಚರ್ಚ್ ಆವರಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕ್ರಿಸ್‌ಮಸ್‌ನ ಮಹತ್ವ ಸಾರುವ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಯೇಸು ಕ್ರಿಸ್ತನ ಜೀವನದ ವಿವಿಧ ಘಟ್ಟಗಳನ್ನು ಪರಿಚಯಿಸುವ ದೃಶ್ಯಗಳು ಕಂಡುಬಂದವು. ವಿದ್ಯುದ್ದೀಪಗಳ ಬೆಳಕಿನಲ್ಲಿ ಕ್ರಿಸ್‌ಮಸ್ ಟ್ರೀಗಳ ಅಂದವನ್ನು ಜನರು ಕಣ್ತುಂಬಿಕೊಂಡರು. ಚರ್ಚ್‌ನ ಆವರಣದಲ್ಲಿ ಸಾರ್ವಜನಿಕರು ಮೊಂಬತ್ತಿ ಹಚ್ಚುವ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಪುಸ್ತಕಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಮಕ್ಕಳು ಸಾಂತಾಕ್ಲಾಸ್ ವೇಷದಲ್ಲಿ ಮಿಂಚಿದರು. ಟೋಪಿಗಳು, ಮಕ್ಕಳ ಆಟಿಕೆ ಸಾಮಾನುಗಳು, ಇನ್ನಿತರ ವಸ್ತುಗಳ ಮಾರಾಟ ಜೋರಾಗಿತ್ತು. ಕ್ರಿಶ್ಚಿಯನ್ ಸಮುದಾಯದವರ ಮನೆಗಳಲ್ಲೂ ಹಬ್ಬದ ಸಡಗರ ತುಂಬಿತ್ತು. ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ನೆಂಟರು, ಸ್ನೇಹಿತರನ್ನು ಕರೆದು ಹಬ್ಬದ ಖುಷಿಯನ್ನು ಹಂಚಿಕೊಳ್ಳಲಾಯಿತು.