ನಂಬಿಕೆಗೆ ಹೆಸರಾದ ಆರ್ಯ ವೈಶ್ಯ ಸಮಾಜ

dvg-arya-vaishya.jpg
Published on

ದಾವಣಗೆರೆ :  ಆರ್ಯ ವೈಶ್ಯ ಸಮಾಜವು ನಂಬಿಕೆ, ದಾನ ಮತ್ತು ಸಂಸ್ಕೃತಿಗೆ ಹೆಸರಾಗಿದೆ ಎಂದು ರಾಜ್ಯ ಸರ್ಕಾರದ ನಿವೃತ್ತ ಅಪರ ನಿರ್ದೇಶಕ ಡಾ. ಜೆ.ವಿ. ನಂದನ ಕುಮಾರ್ ಹೇಳಿದರು.  ಶ್ರೀ ವಾಸವಿ ಸೇವಾ ಸಂಘದಿಂದ ನಗರದ ಡಿ.ಸಿ.ಎಂ ಟೌನ್‌ಷಿಪ್‌ನಲ್ಲಿ ಬುಧವಾರ ಆಯೋಜಿಸಿದ್ದ, ಪ್ರೇಮಾ ರಾಜನಹಳ್ಳಿ ರಮಾನಂದ್ ಕಲ್ಯಾಣ ಮಂಟಪದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಸಮಾಜದಲ್ಲಿ ಶಿಕ್ಷಣ, ಸಂಸ್ಕೃತಿ, ಸಾಫ್ಟ್‌ವೇರ್, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಅಂಥವರನ್ನು ಬೆಳಕಿಗೆ ತರುವ ಅಗತ್ಯವಿದೆ. ಯುವಕರಿಗೆ ಸಾಕಷ್ಟು ಅವಕಾಶಗಳಿವೆ, ಅವರಿಗೆ ಮಾರ್ಗದರ್ಶನದ ಕೊರತೆಯಿದೆ ಎಂದು ತಿಳಿಸಿದರು.  ಆರ್ಯ ವೈಶ್ಯ ಮಹಾಸಭಾದಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಮಾಜದವರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ವಾಸವಿ ಅಕಾಡೆಮಿಯ ಮೂಲಕ ಯುವಕರಿಗೆ ಸ್ಪರ್ಧಾತ್ಮಕ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.  ರಾಜ್ಯ ಸರ್ಕಾರದಲ್ಲಿ ಸಮಾಜದ 800ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಸಮಾಜದವರು ಹಿಂಜರಿಕೆ ತೊರೆದು ಸವಾಲುಗಳನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  ಮಕ್ಕಳು ಸಂಸ್ಕಾರವಂತರಾಗಬೇಕು. ಮೊಬೈಲ್ ಗೀಳಿನಿಂದ ಹೊರ ಬರಬೇಕು. ಹಿರಿಯರಿಗೆ ಗೌರವ ನೀಡಬೇಕು ಎಂದು ಕಿವಿಮಾತು ಹೇಳಿದರು.  ವಾಸವಿ ಸಂಘವು ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ವಾಸವಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಅಶೋಕ್ ಪ್ರಾಸ್ತಾವಿಕ ಮಾತನಾಡಿ, 2002-03ರಲ್ಲಿ  ವಾಸವಿ ಸಂಘವನ್ನು ಆರಂಭಿಸಲಾಯಿತು. 2007ರಲ್ಲಿ ವಾಸವಿ ದೇವಸ್ಥಾನ ಉದ್ಘಾಟಿಸಲಾಯಿತು. 2010ರಲ್ಲಿ ಗೋಪುರ ನಿರ್ಮಾಣ ಮಾಡಲಾಯಿತು. ಸಂಘದ ವತಿಯಿಂದ ವಿಶೇಷ ಪೂಜೆ, ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗಿದೆ ಎಂದು ಮಾಹಿತಿ ನೀಡಿದರು.  ಕಾರ್ಯಕ್ರಮವನ್ನು ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಜನಹಳ್ಳಿ ರಮಾನಂದ ಉದ್ಘಾಟಿಸಿದರು. ಪ್ರೇಮಾ ರಮಾನಂದ, ವಾಸವಿ ಸಂಘದ ಗೌರವಾಧ್ಯಕ್ಷ ಡಾ.ಬಿ.ಎಸ್. ನಾಗಪ್ರಕಾಶ್, ಅಧ್ಯಕ್ಷ ಕೆ.ಎಸ್. ರುದ್ರಶ್ರೇಷ್ಠಿ, ಚನ್ನಗಿರಿ ಸತ್ಯನಾರಾಯಣ ಶ್ರೇಷ್ಠಿ, ಕಟ್ಟಡದ ತಾಂತ್ರಿಕ ನಿರ್ದೇಶಕ ಕೆ.ಎಲ್. ರವೀಂದ್ರನಾಥ ಶ್ರೇಷ್ಠಿ, ವರ್ತಕರಾದ ಎಚ್.ಆರ್. ಕಾಶಿ ವಿಶ್ವನಾಥ್ ಶ್ರೇಷ್ಠಿ, ಎಲ್.ಜೆ. ರಾಧಾಕೃಷ್ಣ ಶ್ರೇಷ್ಠಿ ಇದ್ದರು.  ವಾಸವಿ ಸೇವಾ ಸಂಘದ ಆಡಳಿತ ಮಂಡಳಿಯ ಎಚ್. ಪ್ರಹ್ಲಾದ ಶ್ರೇಷ್ಠಿ, ಬಿ.ಎಸ್. ರಾಮಶ್ರೇಷ್ಠಿ, ಬಿ.ವಿ. ಗಂಗಪ್ಪ ಶ್ರೇಷ್ಠಿ, ಎಚ್. ವೆಂಕಟೇಶ್, ಟಿ.ಎಸ್. ಕಿರಣ್, ಎಚ್.ಬಿ. ಮಾರುತಿ, ಎಚ್.ಎಲ್. ರತ್ನಕುಮಾರ ಶ್ರೇಷ್ಠಿ, ಕೆ.ಎಸ್. ನಾಗರಾಜ್, ಬಿ.ಎಚ್. ಭಾರ್ಗವರಾಮ, ಪ್ರಸನ್ನ ಕುಮಾರ್ ಪಾಲ್ಗೊಂಡಿದ್ದರು. ಲತಾ ಪ್ರಾರ್ಥಿಸಿದರು, ಬೃಂದಾ ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net