ಜಿಲ್ಲೆಯಲ್ಲಿ ನಿಂತಿಲ್ಲ ಬಾಲ್ಯ ವಿವಾಹದ ಓಟ

baaly.jpg
Published on

ರಮೇಶ ಜಹಗೀರದಾರ್ ದಾವಣಗೆರೆ : ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿರಂತರವಾಗಿ ಪ್ರಯತ್ನಿಸುತ್ತಿದೆಯಾದರೂ, ಈ ಸಾಮಾಜಿಕ ಪಿಡುಗಿನ ಪ್ರಕರಣಗಳ ಓಟ ಮಾತ್ರ ನಿಂತಿಲ್ಲ. ಕಳೆದ 4 ತಿಂಗಳಲ್ಲಿ 31 ಕೇಸ್‌ಗಳು ದಾಖಲಾಗಿದ್ದು ಅವುಗಳಲ್ಲಿ 28 ಮದುವೆಗಳನ್ನು ತಡೆಯಲಾಗಿದೆ. ಉಳಿದ ಮೂರು ನಡೆದುಹೋಗಿವೆ.  ಇಪ್ಪತ್ತೊಂದು ವರ್ಷದೊಳಗಿನ ಗಂಡು ಹಾಗೂ 18 ವರ್ಷದೊಳಗಿನ ಹೆಣ್ಣಿನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನವರಾಗಿಲ್ಲದಿದ್ದರೂ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಬಡತನ, ಅನಕ್ಷರತೆ, ಮೂಢ ನಂಬಿಕೆ ಇತ್ಯಾದಿ ಕಾರಣಗಳಿಂದ ಏರ್ಪಡುವ ಈ ಮದುವೆಗಳಿಂದ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಹಾಗೂ ಸಾಮಾಜಿಕವಾಗಿಯೂ ದುಷ್ಪರಿಣಾಮಗಳಾಗುತ್ತವೆ.  ಮಕ್ಕಳ ಹಕ್ಕುಗಳಿಗೆ ಧಕ್ಕೆ ತರುವ ಬಾಲ್ಯ ವಿವಾಹಗಳಿಗೆ ಕಡಿವಾಣ ಹಾಕಲು ಕಾನೂನಿನ ಪ್ರಬಲ ಅಸ್ತ್ರವೂ ಇದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದೆಯಾದರೂ, ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರದೇ ಇರುವುದು ಕಳವಳಕಾರಿಯಾಗಿದೆ. ಮಕ್ಕಳ ಸುಂದರ ಬಾಲ್ಯವನ್ನು ಕಸಿಯುವ, ಸಮಾಜದ ಸ್ವಾಸ್ಥೃವನ್ನು ಕೆಡಿಸುವ ಇಂಥ ವಿವಾಹಗಳು ನಡೆಯದಂತಾಗಲು ವ್ಯಾಪಕ ಜಾಗೃತಿಯೊಂದೇ ಮಾರ್ಗವಾಗಿದೆ.  ...    (ಬಾಕ್ಸ್)  ಪ್ರಕರಣಗಳ ಏರು ಗತಿ  ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಏರು ಗತಿಯಲ್ಲಿದೆ. 2023-24 ರಲ್ಲಿ 75 ಕೇಸ್‌ಗಳು ದಾಖಲಾಗಿದ್ದು 69 ಪ್ರಕರಣ ತಡೆಗಟ್ಟಲಾಗಿದೆ. 6 ಮದುವೆಗಳು ನಡೆದಿದ್ದು ಎಫ್.ಐ.ಆರ್ ದಾಖಲಿಸಲಾಗಿದೆ.  ಕಳೆದ ವರ್ಷ ಏಪ್ರಿಲ್‌ನಲ್ಲಿ 7, ಮೇ ಹಾಗೂ ಜೂನ್ ತಿಂಗಳಲ್ಲಿ ತಲಾ 8, ಜುಲೈನಲ್ಲಿ 4 ಪ್ರಕರಣಗಳು ದಾಖಲಾಗಿದ್ದವು. 2024-25 ರ ಏಪ್ರಿಲ್‌ನಲ್ಲಿ 8, ಮೇ ತಿಂಗಳಲ್ಲಿ 5, ಜೂನ್‌ನಲ್ಲಿ 12, ಜುಲೈನಲ್ಲಿ 6 ಕೇಸ್‌ಗಳು ದಾಖಲಾಗಿವೆ.  ...    (ಕೋಟ್)  ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಲು ಸಮಾಜದ ಸಹಕಾರ ಬೇಕು. ಎಲ್ಲರಲ್ಲೂ ಜಾಗೃತಿ ಮೂಡಬೇಕು. ಅಂಥ ಕೇಸ್‌ಗಳು ಕಂಡುಬಂದರೆ ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ನಮ್ಮ ಇಲಾಖೆ ವತಿಯಿಂದ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದ್ದೇವೆ.   ಟಿ.ಎನ್. ಕವಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ...    ಕಾರಣಗಳು  * ಬಡತನ, ಅನಕ್ಷರತೆ, ಮೂಢನಂಬಿಕೆ  * ರಕ್ತ ಸಂಬಂಧ ಉಳಿಸಿಕೊಳ್ಳಲು  * ಪಾಲಕರು ಜವಾಬ್ದಾರಿ ಕಳೆದುಕೊಳ್ಳಲು  * ದುಷ್ಪರಿಣಾಮದ ಅರಿವು ಇಲ್ಲದಿರುವುದು  * ದೊಡ್ಡ ಮಗ/ಮಗಳ ಮದುವೆ ಸಂದರ್ಭದಲ್ಲೇ ಒಂದೇ ಖರ್ಚಿನಲ್ಲಿ ಎರಡು ಮದುವೆ ಆಗುತ್ತವೆ ಎನ್ನುವ ಭಾವನೆ  * ಹಿರಿಯರ ಆಸೆ ಈಡೇರಿಸುವ ಉದ್ದೇಶ  * ಕೆಲವು ಸಮುದಾಯದಲ್ಲಿನ ಸಂಪ್ರದಾಯ  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net