

ದಾವಣಗೆರೆ : ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಆಗುತ್ತಿರುವ ಲೋಪಗಳು, ಅನುಷ್ಠಾನ ಹಂತದ ನಿರ್ಲಕ್ಷೃ, ಸೌಲಭ್ಯ ಕೊರತೆಗಳು, ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆಯಲ್ಲಿ ಅನಾವರಣಗೊಂಡವು. ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಬೆಳಗ್ಗೆಯಿಂದ ಜಿಲ್ಲೆಯ ವಿವಿಧೆಡೆ ಕೈಗೊಂಡ ಭೇಟಿಯ ವೇಳೆ ಕಂಡುಕೊಂಡ ಅಂಶಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಉತ್ತರ ಪಡೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಕಂದಾಯ ಇನ್ನಿತರ ಇಲಾಖೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷನೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಜಿಲ್ಲೆಯ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಕಾಳಜಿ ಇದ್ದರೂ, ಕೆಳ ಹಂತದಲ್ಲಿ ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ ಎಂದು ಆಯೋಗದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ವ್ಯವಸ್ಥೆಯ ಸುಧಾರಣೆ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಕೆಲವು ಸೂಚನೆಗಳನ್ನು ನೀಡಿದರು. ತಾಲೂಕಿನ ದೊಡ್ಡಬಾತಿ ಭಾಗಕ್ಕೆ ಭೇಟಿ ನೀಡಿದಾಗ ಅಲ್ಲಿನ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಬರೆಸಿಲ್ಲ. ಸರ್ಕಾರದ ಎಲ್ಲ ಇಲಾಖಾ ಕಚೇರಿ ಕಟ್ಟಡಗಳಲ್ಲೂ ಇದನ್ನು ಪಾಲಿಸಬೇಕು ಎಂದು ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದರು. ದೊಡ್ಡಬಾತಿ, ಹಳೇಬಾತಿ ಗ್ರಾ.ಪಂ.ಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಗಳು ನಡೆದಿಲ್ಲ ಎಂದು ಸದಸ್ಯ ಶೇಕರಗೌಡ ಜಿ. ರಾಮತ್ನಾಳ್ ಹೇಳಿದರು. ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ಇದ್ದರು.