ಶಾಲೆಯಿಂದ ಹೊರಗುಳಿಯುವ ಮಕ್ಕಳು

dvg-child-rights.jpg
Published on

ದಾವಣಗೆರೆ :  ಜಿಲ್ಲೆಯಲ್ಲಿ 6,800 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಕಳವಳ ವ್ಯಕ್ತಪಡಿಸಿದರು.  ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಗರದ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ, ‘ಶಾಲೆಯಲ್ಲಿದೆ ಶಿಕ್ಷಣದ ಜತೆಗೆ ರಕ್ಷಣೆ’ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.  ಶಾಲೆಯಲ್ಲಿ ಶಿಕ್ಷಣದ ಜತೆಗೆ ರಕ್ಷಣೆ ಇರಬೇಕು. ಸರ್ಕಾರಿ ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಸಂಖ್ಯೆ ಹೆಚ್ಚಿದೆ. ಮಕ್ಕಳ ಕಳ್ಳ ಸಾಗಣೆ ಕೂಡ ನಡೆಯುತ್ತಿದೆ. ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರತಿ ಜಿಲ್ಲೆಯಲ್ಲಿ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.  ಬಿಸಿಯೂಟದ ಹಾಜರಾತಿ ಹಾಗೂ ತರಗತಿ ಹಾಜರಾತಿ ನಡುವೆ ಸಾಮ್ಯತೆ ಇಲ್ಲ. ಒಂದೇ ಶಾಲೆಯಲ್ಲಿ ಎರಡು ರೀತಿಯ ದಾಖಲೆ ಸಿಗುತ್ತಿವೆ ಎಂದು ಹೇಳಿದರು.  ಪೋಕ್ಸೋ ಪ್ರಕರಣದಲ್ಲಿ ಮಕ್ಕಳಲ್ಲಿ ಅರಿವಿನ ಕೊರತೆ ಇದೆ. ಮಕ್ಕಳು ಶಾಲೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚು ಇದೆ. ನಿರ್ಲಕ್ಷೃದ ಕಾರಣಕ್ಕೆ ಮಕ್ಕಳು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಕೆಲ ಘಟನೆಗಳಲ್ಲಿ ದೂರು ದಾಖಲು ಮಡಿಕೊಳ್ಳಲು ಸತಾಯಿಸಲಾಗುತ್ತದೆ. ದೋಷಾರೋಪ ಪಟ್ಟಿ ಕೂಡ ಸರಿಯಾಗಿ ಸಲ್ಲಿಕೆ ಆಗುವುದಿಲ್ಲ ಎಂದರು.  ಡಿಡಿಪಿಐ ಜಿ. ಕೊಟ್ರೇಶ ಮಾತನಾಡಿ, ಮಕ್ಕಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೆಲಸ ಮಾಡಿದೆ. ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಮರಳಿ ಕರೆತರುವ ಪ್ರಯತ್ನ ಮಾಡಿದ್ದೇವೆ. ಜಿಲ್ಲೆಯಲ್ಲಿ 303 ಶಾಲೆ ಆರ್‌ಟಿಇ ವ್ಯಾಪ್ತಿಯಲ್ಲಿವೆ. ಹತ್ತು ಸಾವಿರ ಮಕ್ಕಳು ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆದಿದ್ದಾರೆ.  ಆರ್‌ಸಿಎಚ್ ಅಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ, ಸಂಪನ್ಮೂಲ ವ್ಯಕ್ತಿ  ನಾಗರಾಜ ಮುದಹಡಿ ಇದ್ದರು.  ...  (ಬಾಕ್ಸ್)  ಕೋಚಿಂಗ್ ಹಾವಳಿ  ಜಿಲ್ಲೆಯಲ್ಲಿ ಕೋಚಿಂಗ್ ಹಾವಳಿ ಹೆಚ್ಚಾಗಿದೆ, ಮಕ್ಕಳಿಗೆ ಸುರಕ್ಷತೆ ಇಲ್ಲ. ಪಿಯು ಮಕ್ಕಳಿಗೆ ಕೋಚಿಂಗ್ ಹಾವಳಿ ಜಾಸ್ತಿ. ಅನುಮತಿ ಪಡೆಯದೇ ನಡೆಯುತ್ತಿವೆ. ದೌರ್ಜನ್ಯಕ್ಕೆ ಹೊಣೆಗಾರರು ಯಾರು? ವಸತಿ ಶಾಲೆಗೆ ಅನುಮತಿ ಪಡೆಯದೇ ನಡೆಸಲಾಗುತ್ತಿದೆ. ಇದೊಂದು ದೊಡ್ಡ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.  ಆರ್‌ಟಿಇ ಕಾಯ್ದೆಯಡಿ ಎಲ್ಲ ಶಾಲೆ ಬರುತ್ತವೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಶುಲ್ಕ, ಸೌಲಭ್ಯ ಪರಿಶೀಲಿಸಬೇಕು ಎಂದರು.  ...    (ಕೋಟ್)  ಆರೋಗ್ಯ ರಕ್ಷಣೆ ಮಕ್ಕಳಿಗೆ ಅಗತ್ಯ ಇದೆ. ಅಪೌಷ್ಟಿಕತೆ ನಿರ್ಮೂಲನೆಗೆ ಹೆಚ್ಚು ಗಮನ ಹರಿಸಬೇಕು. ಕೆಲ ಶಾಲೆಗಳಲ್ಲಿ ಎರಡು ರೀತಿಯ ಅಡುಗೆ ನಡೆಯುತ್ತಿದೆ. ಎಸ್‌ಡಿಎಂಸಿ ಹಾಗೂ ಶಿಕ್ಷಕರಿಗೆ ಪ್ರತ್ಯೇಕ ಅಡುಗೆ ಆಗುತ್ತಿದೆ, ಇದು ಬೇಡ. ಬಿಸಿಯೂಟ ಸ್ವಚ್ಛ, ಪೌಷ್ಟಿಕ ಆಹಾರ ಆಗಿರಬೇಕು. ನಿರ್ಲಕ್ಷ್ಯ ವಹಿಸುವುದು ಬೇಡ. ಶಿಕ್ಷಣದ ಜತೆಗೆ ಸಂಸ್ಕಾರ ಸಿಗಬೇಕು. ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕು. ಅಂಕ ಗಳಿಸುವ ಯಂತ್ರಗಳಾಗಿ ರೂಪಿಸುವುದು ಬೇಡ. ಸರ್ಕಾರಿ ಶಾಲೆಯಲ್ಲಿ ಪಾಲಕರ ಸಭೆ ಕಡಿಮೆ ಆಗುತ್ತಿವೆ.   ಮಹಾವೀರ ಎಂ. ಕರೆಣ್ಣವರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net