ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಇದ್ದಿದ್ದರೆ ಬದುಕುತ್ತಿತ್ತೆ ಜೀವ ?

IMG-20200204-WA0015.jpg
Published on

ದಾವಣಗೆರೆ : ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 7 ತಿಂಗಳ ಗರ್ಭಿಣಿಯೊಬ್ಬರು ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮಂಗಳವಾರ ಮೃತಪಟ್ಟಿದ್ದು, ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಈ ಘಟನೆ ಕನ್ನಡಿ ಹಿಡಿದಿದೆ.

ಚಿತ್ರದುರ್ಗ ಸಮೀಪದ ಹುಲ್ಲೂರು ಗ್ರಾಮದ ಭವಾನಿ (26) ಮೃತಪಟ್ಟ ಮಹಿಳೆ. ಆಕೆಯ ಸಾವಿಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷೃ ಕಾರಣ ಎಂದು ರೋಗಿಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಭವಾನಿ ಅವರನ್ನು ಸೋಮವಾರ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಮಂಗಳವಾರ ಬೆಳಗ್ಗೆ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಕೊನೆಯುಸಿರೆಳೆದರು.

‘ಭವಾನಿ ಅವರು 30 ವಾರದ ಗರ್ಭಿಣಿಯಾಗಿದ್ದರು. ಅವರ ಕರಳುಗಳು ಅಂಟಿಕೊಂಡಿದ್ದವು. ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಯ ಸಿಬ್ಬಂದಿ ಸಿದ್ಧತೆ ನಡೆಸಿದ್ದರು. ಬೆಳಗ್ಗೆ 5.30ಕ್ಕೆ ಮೂತ್ರ ವಿಸರ್ಜನೆ ಮಾಡಿಬಂದ ನಂತರ ಅವರಿಗೆ ಸುಸ್ತಾಯಿತು. ಆಗ ಆಕೆಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕಿತ್ತು. ನಮ್ಮ ಆಸ್ಪತ್ರೆಯಲ್ಲಿ ಹೆಚ್ಚುವರಿ ವೆಂಟಿಲೇಟರ್ ಇರಲಿಲ್ಲ. ಅದಕ್ಕಾಗಿ ಪಕ್ಕದ ಬಾಪೂಜಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದೆವು, ಆದರೆ ರೋಗಿಯನ್ನು ಕರೆದುಕೊಂಡು ಹೋಗಲಿಲ್ಲ’ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ನಾಗರಾಜ್ ತಿಳಿಸಿದರು.

ಆದರೆ ವೈದ್ಯರ ಈ ವಾದವನ್ನು ರೋಗಿಯ ಕಡೆಯವರು ಒಪ್ಪುವುದಿಲ್ಲ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷೃವೇ ಕಾರಣ ಎಂಬುದು ಅವರ ವಾದ. ‘ದಾಖಲಾದಾಗಿನಿಂದ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಸ್ಪಂದಿಸಲಿಲ್ಲ. ಅವರು ಮಾತನಾಡಿದ ರೀತಿಯೂ ಸರಿ ಇರಲಿಲ್ಲ’ ಎಂದು ಭವಾನಿ ಅವರ ತಾಯಿ ಭಾಗ್ಯಮ್ಮ ಆರೋಪಿಸಿದರು.ಇದೇ ವೇಳೆ ರೋಗಿಯ ಕಡೆಯವರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಎಸ್ಪಿ ಕಚೇರಿಗೆ ತೆರಳಿ ಈ ಬಗ್ಗೆ ದೂರು ಸಲ್ಲಿಸಿದರು.

ರೋಗಿ ಕಡೆಯ 10-12 ಜನ ಕರ್ತವ್ಯನಿರತ ವೈದ್ಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಲ್ಲೆ ನಡೆಸಿದರು. ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಸೂಕ್ತ ಭದ್ರತೆ ನೀಡಬೇಕು. ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net