

ದಾವಣಗೆರೆ : ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋದ ಹಲವಾರು ವಿಜ್ಞಾನಿಗಳು, ಸಿಬ್ಬಂದಿಯ ಪರಿಶ್ರಮವಿದೆ. ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ ಈ ಯೋಜನೆಗೆ ದಾವಣಗೆರೆಯ ನಂಟೂ ಇದೆ. ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಶಿವಕುಮಾರ್ ಎಸ್. ಪಾಟೀಲ್ ಅವರೂ ಆ ತಂಡದಲ್ಲಿ ಕೆಲಸ ಮಾಡಿರುವುದು ಬೆಣ್ಣೆನಗರಿಯ ಜನರಿಗೆ ಹೆಮ್ಮೆಯ ಸಂಗತಿ.
ಮೂಲತಃ ವಿಜಯಪುರ ಜಿಲ್ಲೆಯ ಕೂಡಲ ಸಂಗಮದವರಾದ ಶಿವಕುಮಾರ್, ಬಿಐಇಟಿಯಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ವಿಭಾಗದಲ್ಲಿ 1993 ರಿಂದ 1997ರ ವರೆಗೆ ವ್ಯಾಸಂಗ ಮಾಡಿದ್ದರು.
ಇಂಜಿನಿಯರಿಂಗ್ ಪದವಿ ಪೂರೈಸಿದ ಕೆಲವೇ ದಿನಗಳಲ್ಲಿ ಅವರು ಇಸ್ರೋ ಸಂಸ್ಥೆಗೆ ಸೇರ್ಪಡೆಯಾದರು. 2 ದಶಕಗಳಿಗೂ ಹೆಚ್ಚಿನ ಸುದೀರ್ಘ ಅನುಭವದಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
ಚಂದ್ರಯಾನ-3 ಯೋಜನೆಯಲ್ಲಿ ವಿದ್ಯುತ್ ವ್ಯವಸ್ಥೆಯನ್ನು ನಿರ್ವಹಿಸುವ ಪವರ್ ಸಿಸ್ಟಂ ಟೆಸ್ಟ್ ಆ್ಯಂಡ್ ಇವ್ಯಾಲ್ಯುಯೇಶನ್ ವಿಭಾಗದ ಮುಖ್ಯಸ್ಥರಾಗಿ ಶಿವಕುಮಾರ್ ಮಹತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಲ್ಯಾಂಡರ್, ರೋವರ್ ಸೇರಿ ಇಡೀ ಯೋಜನೆಯು ಸೌರಶಕ್ತಿಯ ಮೂಲಕ ನಿರ್ವಹಣೆಯಾಗುತ್ತದೆ. 8 ಜನರ ತಂಡದೊಂದಿಗೆ ಅವರು ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಚಂದ್ರಯಾನ-2ರಲ್ಲೂ ಕೆಲಸ ಮಾಡಿದ ಅನುಭವ ಶಿವಕುಮಾರ್ ಅವರಿಗಿದೆ. ಆ ಯೋಜನೆಯಲ್ಲಿ ಆಗಿದ್ದ ಸಣ್ಣ ಪುಟ್ಟ ಕೊರತೆಗಳನ್ನು ಸರಿಪಡಿಸಿಕೊಂಡು ಈ ಬಾರಿ ಹೆಚ್ಚು ಎಚ್ಚರಿಕೆಯೊಂದಿಗೆ ಕೆಲಸ ಮಾಡಿದೆವು. ಆತ್ಮವಿಶ್ವಾಸ ಉನ್ನತ ಮಟ್ಟದಲ್ಲಿತ್ತು ಎಂದು ಅವರು ತಿಳಿಸಿದರು.
ಚಂದ್ರಯಾನ ಯೋಜನೆಯ ಭಾಗವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದ ಅವರು, ಇಸ್ರೋ ತಂಡವು ವಿನ್ಯಾಸ ಮಾಡಿದಂತೆಯೇ ಎಲ್ಲವೂ ಆಗಿದೆ. ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ಕೊನೆಯ ಕ್ಷಣಗಳು ಬಹಳ ರೋಮಾಂಚನಕಾರಿಯಾಗಿದ್ದವು. ಖುಷಿ, ಉತ್ಸಾಹ ಮೇಳೈಸಿತ್ತು ಎಂದು ಹೇಳಿದರು.
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ತಾವು ವಿದ್ಯಾಭ್ಯಾಸ ಮಾಡಿದ ದಿನಗಳನ್ನು ಶಿವಕುಮಾರ್ ನೆನಪು ಮಾಡಿಕೊಂಡರು. ಆಗ ಕುವೆಂಪು ವಿಶ್ವವಿದ್ಯಾಲಯ ಮಟ್ಟದಲ್ಲಿ 5ನೇ ರ‌್ಯಾಂಕ್ ಗಳಿಸಿದ್ದಾಗಿ ಮೆಲುಕು ಹಾಕಿದರು. ತಮ್ಮ ಹಳೆಯ ವಿದ್ಯಾರ್ಥಿ ಚಂದ್ರಯಾನ ಯೋಜನೆಯ ಭಾಗವಾಗಿದ್ದಕ್ಕೆ ಕಾಲೇಜಿನ ಅಧ್ಯಾಪಕ ವರ್ಗದವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.