ಸಿಇಟಿ ಪರಿಕ್ಷಾ ಪದ್ಧತಿ ವಿದ್ಯಾರ್ಥಿಗಳಿಗೆ ಅನುಕೂಲಕರ

dvg-Ubdt.jpg
Published on

ದಾವಣಗೆರೆ : ಸಿಇಟಿ ಪರಿಕ್ಷಾ ಪದ್ಧತಿಯು ಅತ್ಯಂತ ನಿಖರ ಹಾಗೂ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ ಹೇಳಿದರು.  ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಬೆಂಗಳೂರಿನ ಕೆ.ಇ.ಎ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ, ಸಿಇಟಿ 2025 ರಲ್ಲಿ ಅರ್ಹಗೊಂಡ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಕೋರ್ಸ್‌ಗಳಿಗೆ ಆಯ್ಕೆ ಮಾಡಲು ಸೀಟು ಹಂಚಿಕೆ ಮಂಥನದ ಕಾರ್ಯಕ್ರಮದಲ್ಲಿ ಮಾತನಾಡಿದರು.  ಕರ್ನಾಟಕವು ದೇಶದಲ್ಲೇ ಪ್ರಥಮವಾಗಿ ಸಿಇಟಿ ಪರೀಕ್ಷಾ ಪದ್ಧತಿಯನ್ನು ಪರಿಚಯಿಸಿ, ಅರ್ಹ ವಿದ್ಯಾರ್ಥಿಗಳಿಗೆ, ವೃತ್ತಿ ಶಿಕ್ಷಣ, ಕೋರ್ಸುಗಳಾದ ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ವಿಷಯಗಳಿಗೆ ಆಯ್ಕೆಯಾಗುವ ವಿಧಾನವನ್ನು ಪರಿಚಯಿಸಿತು ಎಂದು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ ನಾಗರಾಜಪ್ಪ ಮಾತನಾಡಿ, ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕರು 1984 ರಿಂದಲೇ ಸಿಇಟಿ ಪರೀಕ್ಷಾ ಪದ್ಧತಿಯ ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ ಎಂದು ತಿಳಿಸಿದರು.  ಯಾಂತ್ರಿಕ ವಿಭಾಗದ ಎಮಿರೆಟಸ್ ಪ್ರಾಧ್ಯಾಪಕ ಡಾ. ಎಸ್.ಬಿ. ಮಲ್ಲೂರು ಅವರು ಕಾರ್ಯಕ್ರಮದ ಸಂಯೋಜಕರಾಗಿದ್ದು, ಸಿಇಟಿ 2025 ರ ಹೊಸದಾಗಿ ಬದಲಾವಣೆಯಾದ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ವಿವರಿಸಿದರು.  ಈ ಬಾರಿ ಸೀಟು ಹಂಚಿಕೆ ಪದ್ಧತಿಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಖುದ್ದಾಗಿ ಹಾಜರಾಗಿದ್ದು. ಮಾರ್ಗದರ್ಶನದ ಪ್ರಕಾರ, ಸೀಟು ಹಂಚಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರು. ಸೀಟು ಹಂಚಿಕೆಯ ಬಗ್ಗೆ ಪಿಪಿಟಿ ಮೂಲಕ ವಿವರಿಸಿದರು. ಕೆ.ಇ.ಎ ತಾಂತ್ರಿಕ ಅಧಿಕಾರಿ ಅಶ್ವಿನಿ ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲಕರೊಂದಿಗೆ ಭಾಗವಹಿಸಿದ್ದರು. ಕಾಲೇಜಿನ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಎಸ್. ಮಂಜಪ್ಪ, ಡಾ. ಈರಪ್ಪ ಸೂಗಲಾದ್, ಡಾ. ಮಂಜನಾಯ್ಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆ.ಎಸ್. ಅಪ್ರಮೇಯ ಭಾಗವಹಿಸಿದ್ದರು. ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಎಚ್. ದಿವಾಕರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net